ಮಂಡಿ ನೋವು ಬಹುದೊಡ್ಡ ಸಮಸ್ಯೆ. ಕೊಂಚ ಬೊಜ್ಜಿನ ತೊಂದರೆ ಇದ್ದವರಲ್ಲಂತೂ ಮಂಡಿ ನೋವು, ಕೀಲು ನೋವು ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ 30 ದಾಟಿದವರಲ್ಲಿ ಕೀಲು ನೋವು ಕಾಣಿಸಿಕೊಳ್ತಾ ಇದೆ. ಕೀಲು ನೋವು ತಡೆಯಲಾಗದೇ ಒದ್ದಾಡುತ್ತಿರುವವರು ಪೇಯ್ನ್ ಕಿಲ್ಲರ್ಗಳನ್ನು ತೆಗೆದುಕೊಳ್ಳುವ ಬದಲು ಕೆಲವು ತೈಲಗಳನ್ನು ಉಪಯೋಗಿಸಿ ನೋಡಬೇಕು.
ಕೀಲು ನೋವಿಗೆ ಪರಿಣಾಮಕಾರಿ ತೈಲಗಳ ಪೈಕಿ ಶುಂಠಿ ಎಣ್ಣೆಯೂ ಒಂದು. ಶುಂಠಿ ನಿಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಅದೇ ರೀತಿ ಶುಂಠಿ ತೈಲ ಕೂಡ ಕೀಲು ನೋವನ್ನು ಗುಣಪಡಿಸಬಲ್ಲದು. ನೋವಿರುವ ಜಾಗದಲ್ಲಿ ಶುಂಠಿ ತೈಲದಿಂದ ಮಸಾಜ್ ಮಾಡಿಕೊಳ್ಳಬೇಕು. ನಿಯಮಿತವಾಗಿ ಈ ರೀತಿ ಮಾಡುತ್ತ ಬಂದಲ್ಲಿ ನೋವು ತಂತಾನೇ ಮಾಯವಾಗುತ್ತದೆ.
ಶುಂಠಿ ಎಣ್ಣೆಯನ್ನು ತಯಾರಿಸುವುದು ಕೂಡ ಸುಲಭ. ಶುಂಠಿಯನ್ನು ಚೆನ್ನಾಗಿ ತುರಿದುಕೊಳ್ಳಿ. ಅದಕ್ಕೆ ಆಲಿವ್ ಆಯಿಲ್ ಅನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿ ತಣ್ಣಗಾಗಲು ಬಿಡಿ. ಅದನ್ನು ಒಂದು ಗಾಜಿನ ಬಾಟಲಿಯಲ್ಲಿ ತುಂಬಿಸಿಡಿ. ಪ್ರತಿನಿತ್ಯ ಈ ಎಣ್ಣೆಯಿಂದ ನೋವಿರುವ ಜಾಗಕ್ಕೆ ಮಸಾಜ್ ಮಾಡಿಕೊಳ್ಳಿ.
ಶುಂಠಿ ಎಣ್ಣೆ ಬಳಸುವುದರಿಂದ ಕೀಲು ನೋವು ಗುಣವಾಗುವುದು ಮಾತ್ರವಲ್ಲ, ಹೃದಯದ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ಶುಂಠಿ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಪರಿಣಾಮ ಹೃದಯಾಘಾತದ ಅಪಾಯ ಇರುವುದಿಲ್ಲ. ಅದರರ್ಥ ಹೃದಯವನ್ನು ಸದೃಢವಾಗಿಡಲು ನೀವು ಶುಂಠಿಯನ್ನು ಸೇವಿಸಬೇಕು.
ಶುಂಠಿ ತೈಲ ಮಾತ್ರವಲ್ಲ, ಶುಂಠಿ ಚಹಾ ಮಾಡಿ ಕೂಡ ಕುಡಿಯಬಹುದು. ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಆ ನೀರನ್ನು ಕುಡಿದರೆ ಅನೇಕ ರೀತಿಯ ಪ್ರಯೋಜನಗಳಿವೆ. ಉರಿಯೂತ ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.