ಮಂಗಳೂರು: ಆರ್.ಎಸ್.ಎಸ್ ಮೂಲ ಪ್ರಶ್ನಿಸಿದ್ದ ವಿಪಕ್ಷ ನಾಯಕ, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ವೋಟ್ ಬ್ಯಾಂಕ್ ಗಾಗಿ ಸಿದ್ದರಾಮಯ್ಯ ಅವರದ್ದು ಉಗ್ರರ ಕಾಲು ನೆಕ್ಕುವ ಸ್ಥಿತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕವಾಗಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಇವರ ನಾಯಕರೇ ಭ್ರಷ್ಟಾಚಾರ ನಡೆಸಿ ಬೇಲ್ ಮೇಲೆ ಹೊರಗಿದ್ದಾರೆ. ಭ್ರಷ್ಟ, ಉಗ್ರವಾದಿ, ಕ್ರಿಮಿನಲ್ ಪಕ್ಷ ಕಾಂಗ್ರೆಸ್. ಕೇಸ್ ಇದ್ದರೆ ಮಾತ್ರ ಕಾಂಗ್ರೆಸ್ ನಲ್ಲಿ ನೆಲೆಯಿದೆ ಇಲ್ಲವಾದಲ್ಲಿ ಪಕ್ಷದಲ್ಲಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಎಸ್.ಎಸ್. ನವರು ಮೂಲ ಭಾರತದವರಾ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡುವುದರಲ್ಲಿ ಸಿದ್ದರಾಮಯ್ಯ ಹೆಸರುವಾಸಿ. ಪಕ್ಷದಲ್ಲಿ ಸಿದ್ದಾರಾಮಯ್ಯ ವಿರುದ್ಧವೇ ತಂತ್ರಗಾರಿಕೆ ನಡೆದಿದೆ. ಮತ ಬ್ಯಾಂಕ್ ಗಾಗಿ ಭಯೋತ್ಪಾದಕರ ಕಾಲು ನೆಕ್ಕುವ ಸ್ಥಿತಿ ಸಿದ್ದರಾಮಯ್ಯನವರದ್ದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವಾಗಲೇ ಆಡಳಿತ ಹಾಗೂ ವಿಪಕ್ಷ ನಾಯಕರ ವಾಕ್ಸಮರ ತಾರಕಕ್ಕೇರಿದ್ದು, ಪರಸ್ಪರ ವಾಗ್ದಾಳಿ ನಡೆಸುವ ಭರದಲ್ಲಿ ವಿವಾದಕ್ಕೂ ಕಾರಣವಾಗುತ್ತಿದ್ದಾರೆ.