ಮುಂಬೈ: ಸದ್ಯ ರಾಜ್ಯಸಭಾ ಚುನಾವಣೆಯ ಕಾವು ಹೆಚ್ಚಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಭರವಸೆ ನಂಬಿ ಹತಾಶರಾದವರು ಒಬ್ಬೊಬ್ಬರೇ ಅಸಮಾಧಾನ ಹೊರಹಾಕತೊಡಗಿದ್ದಾರೆ.
ಅಂಥವರ ಪೈಕಿ ಬಾಲಿವುಡ್ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ, ಪವನ್ ಖೇರಾ ಕೂಡ ಇದ್ದಾರೆ. ಮಹಾರಾಷ್ಟ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉತ್ತರ ಪ್ರದೇಶದ ಇಮ್ರಾನ್ ಪ್ರತಾಪ್ಗಢಿ ಎದುರು ನನ್ನ 18 ವರ್ಷಗಳ ತಪಸ್ಸು ಕಡಿಮೆಯಾಗಿದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಗ್ಮಾ ಅಸಮಾಧಾನ ತೋಡಿಕೊಂಡಿದ್ದಾರೆ.
ಜೂನ್ 10 ರಂದು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲಿರುವ 10 ಅಭ್ಯರ್ಥಿಗಳ ಪಟ್ಟಿಯನ್ನು ಮೇ 28 ರಂದು ಕಾಂಗ್ರೆಸ್ ಪಕ್ಷವು ಭಾನುವಾರ ಪ್ರಕಟಿಸಿದ ನಂತರ ಈ ಹೇಳಿಕೆ ಬಂದಿದೆ. 2004 ರಲ್ಲಿ ಕಾಂಗ್ರೆಸ್ ಸೇರಿದ ನಗ್ಮಾಗೆ ಪಟ್ಟಿಯಲ್ಲಿ ಜಾಗ ಸಿಕ್ಕಿಲ್ಲ.
BIG BREAKING: PSI ನೇಮಕಾತಿ ಅಕ್ರಮ; ನಾಪತ್ತೆಯಾಗಿದ್ದ ಶಾಂತಾಬಾಯಿ ಕೊನೆಗೂ CID ಬಲೆಗೆ
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಅವರು “ನನ್ನ ತಪಸ್ಸಿನಲ್ಲಿ ಏನಾದರೂ ಕಾಣೆಯಾಗಿರಬಹುದು” ಎಂದು ಟ್ವೀಟ್ ಮಾಡಿದ್ದರು. ಇದಾಗಿ ಆರು ನಿಮಿಷಗಳ ನಂತರ ಈ ಟ್ವೀಟನ್ನು ಮರುಟ್ವೀಟ್ ಮಾಡಿದ ನಗ್ಮಾ, “ಇಮ್ರಾನ್ ಭಾಯ್ ಮುಂದೆ ನಮ್ಮ 18 ವರ್ಷಗಳ ತಪಸ್ಸು ಕೂಡ ಕಡಿಮೆಯಾಯಿತು” ಎಂದು ಹೇಳಿದ್ದಾರೆ.
ಸೋಮವಾರ ಮತ್ತೊಂದು ಟ್ವೀಟ್ ಮಾಡಿದ ನಗ್ಮಾ, ” ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಜಿ 2003/04ರಲ್ಲಿ ನನಗೆ ರಾಜ್ಯಸಭೆಗೆ ಅವಕಾಶ ಕಲ್ಪಿಸಲು ವೈಯಕ್ತಿಕವಾಗಿ ವಾಗ್ದಾನ ಮಾಡಿದ್ದರು. ಈ ಭರವಸೆ ಮೇರೆಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಇದಾಗಿ 18 ವರ್ಷಗಳು ಕಳೆದಿವೆ. ಇಮ್ರಾನ್ಗೆ ರಾಜ್ಯಸಭೆಗೆ ಅವಕಾಶ ಕಲ್ಪಿಸಲಾಗಿದೆ. ನನಗೆ ಅವಕಾಶ ಸಿಗಲಿಲ್ಲ, ನನ್ನಲ್ಲೇನು ಅರ್ಹತೆ ಕಡಿಮೆ ಆಗಿದೆ ?” ಎಂದು ಪ್ರಶ್ನಿಸಿದ್ದಾರೆ.