ಹೈದರಾಬಾದ್: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು ನಾಪತ್ತೆಯಾಗಿದ್ದ ಪ್ರಮುಖ ಆರೋಪಿ ಶಾಂತಾಬಾಯಿಯನ್ನು ಬಂಧಿಸಿದ್ದಾರೆ.
545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಬೆಳಕಿಗೆ ಬಂದ ಏಪ್ರಿಲ್ 9ರಿಂದ ಶಾಂತಾಬಾಯಿ ಎಸ್ಕೇಪ್ ಆಗಿದ್ದರು. ಒಂದುವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಶಾಂತಾಬಾಯಿಯನ್ನು ಇದೀಗ ಹೈದರಾಬಾದ್ ನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಶಾಂತಾಬಾಯಿ 40 ಲಕ್ಷ ರೂಪಾಯಿ ಹಣ ಕೊಟ್ಟು ಬ್ಲುಟೂಥ್ ಮೂಲಕ ಅಕ್ರಮ ನಡೆಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರು. ವಾರಂಟ್ ಜಾರಿಯಾಗಿದ್ದರೂ ಶರಣಾಗದೇ ತಲೆಮರೆಸಿಕೊಂಡಿದ್ದ ಶಾಂತಾಬಾಯಿ, ಹೈದರಾಬಾದ್ ನಲ್ಲಿ ಇರುವ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಳೆದ ಮೂರು ದಿನಗಳಿಂದ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಶಾಂತಾಬಾಯಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಶಾಂತಾಬಾಯಿ ಬಂಧಿಸುವಲ್ಲಿ ಪೊಲಿಸರು ಯಶಸ್ವಿಯಾಗಿದ್ದಾರೆ.