ಹುಬ್ಬಳ್ಳಿ: ಸಿದ್ದರಾಮಯ್ಯ ಇಟಲಿ ನಾಯಕರಿಗೆ ಹತ್ತಿರವಾಗಲು ಆರ್.ಎಸ್.ಎಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ನಾನು ಆರ್.ಎಸ್.ಎಸ್ ಮೂಲ ಪ್ರಶ್ನಿಸಿದರೆ ಬಿಜೆಪಿಯವರು ಯಾಕೆ ಉತ್ತರಿಸುತ್ತಿದ್ದಾರೆ ಆರ್.ಎಸ್.ಎಸ್ ನಾಯಕರೇಕೆ ಸುಮ್ಮನಿದ್ದಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದ ಸಿದ್ದರಾಮಯ್ಯ ಹೆಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾವೆಲ್ಲರೂ ಆರ್.ಎಸ್.ಎಸ್ ನವರೇ. ಇಟಲಿ ನಾಯಕರಿಗೆ ಹತ್ತಿರವಾಗಲು, ಮುಸ್ಲಿಂ ವೋಟ್ ಬ್ಯಾಂಕ್ ಪಡೆದು ಮತ್ತೆ ಸಿಎಂ ಆಗಬಹುದು ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗಿರುವ ಕಾಂಗ್ರೆಸ್ ಪಕ್ಷ ನಕಲಿ ಕಾಂಗ್ರೆಸ್. ಸಿದ್ದರಾಮಯ್ಯ ಡ್ಯುಪ್ಲಿಕೇಟ್ ಕಾಂಗ್ರೆಸ್ ನ ನಕಲಿ ಲೀಡರ್ ಅಷ್ಟೇ. ಮುಸ್ಲಿಂ ತುಷ್ಟೀಕರಣಕ್ಕೋಸ್ಕರ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕೇವಲ ಬಿಜೆಪಿಯವರಷ್ಟೇ ಹಿಂದೂಗಳು ಎಂದು ನಾವ್ಯಾರೂ ಹೇಳಿಲ್ಲ. ಈ ಹಿಂದೆ ಸಿದ್ದರಾಮಯ್ಯ ನಾವು ಹಿಂದೂಗಳೇ ಅಲ್ಲ ಎಂದು ಹೇಳುತ್ತಿದ್ದರು. ಸದ್ಯ ಅವರು ಹಿಂದೂ ಎಂದು ಹೇಳುತ್ತಿರುವುದೇ ಸಂತೋಷ ಎಂದು ತಿರುಗೇಟು ನೀಡಿದ್ದಾರೆ.