ಅಹಮದಾಬಾದ್: ಹಿಂದುಳಿದ ಜಾತಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮದುವೆ ಮೆರವಣಿಗೆಯ ಮೇಲೆ 150 ರಿಂದ 200 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, 8 ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ಗುಜರಾತ್ ನ ಬನಸ್ಕಾಂತ ಜಿಲ್ಲೆಯ ದೀಸಾ ಪ್ರದೇಶದ ಕುಂಪತ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೆರವಣಿಗೆಯ ವೇಳೆ ಡಿಜೆ ಬಳಕೆ, ವರ ಕುದುರೆ ಮೇಲೆ ಸವಾರಿ ಮಾಡುವುದರ ವಿರುದ್ಧ ಆಕ್ರೋಶಗೊಂಡ ಸಮುದಾಯದವರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮದುವೆ ಮೆರವಣಿಗೆಯ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಕುಂಪತ್ ಗ್ರಾಮದಲ್ಲಿ 70 ಜನರನ್ನು ಬಂಧಿಸಲಾಗಿದೆ. ಕೋಲಿ ಠಾಕೋರ್ ಸಮುದಾಯಕ್ಕೆ ಸೇರಿದ ವಿಷ್ಣುಸಿಂಗ್ ಚೌಹಾಣ್ ಅವರ ವಿವಾಹ ಮೆರವಣಿಗೆಯು ಭಾರೀ ಪೊಲೀಸ್ ಭದ್ರತೆಯಲ್ಲಿ ಗ್ರಾಮದ ದೇವಸ್ಥಾನದಿಂದ ಪ್ರಾರಂಭವಾಗಿದೆ.
ಈ ಹಿಂದೆ ಮೆರವಣಿಗೆಯ ವೇಳೆ ಕುದುರೆ ಸವಾರಿ ಮಾಡುವುದರ ಬಗ್ಗೆ ದರ್ಬಾರ್(ಕ್ಷತ್ರಿಯ) ಸಮುದಾಯದ ಜನರು ಬೆದರಿಕೆ ಹಾಕಿದ್ದು, ಪೊಲೀಸ್ ಭದ್ರತೆ ನೀಡುವಂತೆ ಚೌಹಾಣ್ ಕೋರಿದ್ದರು ಎಂದು ದೀಸಾ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಜೆ. ಚೌಧರಿ ಹೇಳಿದರು.
ಪರಿಸ್ಥಿತಿ ನಿಯಂತ್ರಿಸಲು ಮೂರು ಪೊಲೀಸ್ ಠಾಣೆಗಳಿಂದ ಪಡೆಗಳು ಮತ್ತು ಡೀಸಾದ ಡಿವೈಎಸ್ಪಿ ಕಚೇರಿಯಿಂದ ಹೆಚ್ಚುವರಿ ಪಡೆಯನ್ನು ತಂದು ಗ್ರಾಮದ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದೆವು. ಬಿಗಿ ಪೊಲೀಸ್ ಭದ್ರತೆಯಲ್ಲಿ ಮೆರವಣಿಗೆ ಆರಂಭವಾದ ಕೂಡಲೇ 150-200 ಜನರ ಗುಂಪು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಆರಂಭಿಸಿದವು.
ದಾಳಿಯ ಸಂದರ್ಭದಲ್ಲಿ ಗ್ರಾಮದ ಒಬ್ಬ ಆರೋಪಿ ವರನಿಗೆ ಕುದುರೆ ಸವಾರಿ ಮಾಡಲು ಅವಕಾಶ ನೀಡುವ ಮೂಲಕ ಪೊಲೀಸರು ತಮ್ಮ ಗ್ರಾಮದ ಸಂಪ್ರದಾಯವನ್ನು ಮುರಿಯುತ್ತಿದ್ದಾರೆ ಎಂದು ಹೇಳಿ ಕೋಲಿನಿಂದ ಹೊಡೆಯಲು ಪ್ರಾರಂಭಿಸಿದ. ಇತರ ಗ್ರಾಮಸ್ಥರು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಗುಂಪನ್ನು ಚದುರಿಸಲು ಮೂರು ಸುತ್ತು ಅಶ್ರುವಾಯು ಶೆಲ್ ಗಳನ್ನು ಹಾರಿಸಿದೆವು. ಗುಂಪು ದಾಳಿಯಲ್ಲಿ ಒಟ್ಟು ಎಂಟು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಐದು ಪೊಲೀಸ್ ವ್ಯಾನ್ ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಚೌಧರಿ ಹೇಳಿದ್ದಾರೆ.