ಇದೊಂದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಮತ್ತು ಹೃದಯ ವಿದ್ರಾವಕ ಘಟನೆ. ಈ ಘಟನೆಗೆ ರಾಜಸ್ಥಾನ ಸಾಕ್ಷಿಯಾಗಿದೆ. ಒಂದೇ ಕುಟುಂಬದ ಮೂವರು ಸಹೋದರರನ್ನು ಮದುವೆಯಾಗಿದ್ದ ಮೂವರು ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅದೂ ಸಹ ವರದಕ್ಷಿಣೆ ಎಂಬ ಪೆಡಂಭೂತಕ್ಕೆ ಇವರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳಲ್ಲಿ 4 ವರ್ಷದ ಬಾಲಕ ಮತ್ತು ಕೇವಲ 27 ದಿನಗಳ ಮಗು ಹಾಗೂ ಇಬ್ಬರು ಮಹಿಳೆಯರು ಗರ್ಭಿಣಿಯರಾಗಿದ್ದುದು ಹೃದಯವನ್ನು ಕಲಕುವಂತೆ ಮಾಡಿದೆ.
ದುದು ಜೈಪುರ ಜಿಲ್ಲೆಯ ಚಾಪಿಯಾ ಎಂಬ ಗ್ರಾಮದ ಒಂದೇ ಕುಟುಂಬದ ಮೂವರು ಸಹೋದರರನ್ನು ಕಲು ಮೀನಾ(25 ವರ್ಷ), ಮಮತಾ(23) ಮತ್ತು ಕಮಲೇಶ್(20) ಅವರು ವಿವಾಹವಾಗಿದ್ದರು. ಆದರೆ, ಸಹೋದರರು ಮತ್ತು ಗಂಡನ ಮನೆಯವರು ಈ ಮೂವರು ಸಹೋದರಿಯರಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಲ್ಲದೇ, ದೈಹಿಕ ಹಿಂಸೆಯನ್ನೂ ನೀಡುತ್ತಿದ್ದರು ಎಂದು ಮಹಿಳೆಯರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಈ ಬಗ್ಗೆ ದೂರು ನೀಡಿರುವ ಸಹೋದರಿಯರ ಸಂಬಂಧಿ ಹೇಮರಾಜ್ ಮೀನಾ, ನನ್ನ ಸಹೋದರಿಯರಿಗೆ ಮಾವನ ಮನೆಯಲ್ಲಿ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು ಅಲ್ಲದೇ, ಮಾವನ ಮನೆಯವರೆಲ್ಲಾ ಸೇರಿ ದೈಹಿಕ ಹಲ್ಲೆ ನಡೆಸುತ್ತಿದ್ದರು. ಈ ಕಿರುಕುಳ ತಾಳಲಾರದೇ ಮೇ 25 ರಂದು ಮೂವರು ಸಹೋದರಿಯರು ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದರು. ಈ ಬಗ್ಗೆ ನಾವು ಪೊಲೀಸರು ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೆವು ಎಂದು ತಿಳಿಸಿದ್ದಾರೆ.
BIG NEWS: ಅಂಧರಿಗೆ ನೆರವಾಗುವ ಸ್ಮಾರ್ಟ್ ವಾಚ್ ಅಭಿವೃದ್ಧಿಪಡಿಸಿದ ಐಐಟಿ
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ನಾಲ್ಕು ದಿನಗಳ ನಂತರ ಗ್ರಾಮದ ಬಾವಿಯೊಂದರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ.
ಈ ಮಧ್ಯೆ, ಕಿರಿಯ ಸೋದರಿ ಕಮಲೇಶ್ ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ನಾವು ಈಗ ಸಂತೋಷದಿಂದ ಇದ್ದೇವೆ. ಆದರೆ, ನಮ್ಮ ಸಾವಿಗೆ ಪ್ರಮುಖ ಕಾರಣ ನಮ್ಮ ಮಾವಂದಿರು. ಅವರು ನೀಡುತ್ತಿರುವ ಕಿರುಕುಳವನ್ನು ತಾಳಲಾರದೇ ನಾವು ಮೂರು ಮಂದಿ ಸಾವಿಗೆ ನಿರ್ಧಾರ ಮಾಡಿದ್ದೇವೆ.
ಮುಂದಿನ ಜನ್ಮದಲ್ಲೂ ನಾವು ಮೂವರೂ ಒಟ್ಟಾಗಿರುತ್ತೇವೆ ಎಂಬ ವಿಶ್ವಾಸ ನಮಗಿದೆ. ನಾವು ಸಾಯಬಾರದು ಎಂದುಕೊಂಡಿದ್ದೆವು. ಆದರೆ, ಮಾವಂದಿರ ಕಿರುಕುಳ ನಮ್ಮನ್ನು ಸಾವಿನ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ದಯಮಾಡಿ, ಈ ಘಟನೆಗೆ ನಮ್ಮ ಪೋಷಕರನ್ನು ದೂಷಿಸಬೇಡಿ ಎಂದು ಬರೆದುಕೊಂಡಿದ್ದನ್ನು ಕುಟುಂಬ ಸದಸ್ಯರು ಪೊಲೀಸರಿಗೆ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.