ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಸಾರ್ವಕಾಲಿಕ ದಾಖಲೆಯ ಎಸ್ಎಸ್ಎಲ್ಸಿ ಫಲಿತಾಂಶ ಬಂದಿದ್ದು, 7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಸಹಜವಾಗಿಯೇ ಪಿಯುಸಿ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕೆಲವು ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಶುಲ್ಕವನ್ನು ಶೇ. 5 ರಿಂದ ಶೇಕಡ 40 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಪೋಷಕರು ಮತ್ತು ಆಡಳಿತ ಮಂಡಳಿಗಳ ನಡುವೆ ತಿಕ್ಕಾಟ ಶುರುವಾಗಿದೆ.
3500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 620 ಕ್ಕಿಂತ ಹೆಚ್ಚು ಅಂಕ ಪಡೆದ ಹಿನ್ನೆಲೆಯಲ್ಲಿ ಈ ಬಾರಿ ಮೆರಿಟ್ ಸೀಟ್ ರದ್ದು ಮಾಡಲು ತೀರ್ಮಾನಿಸಲಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಬೋಧನಾ ಶುಲ್ಕ, ಅರ್ಜಿ ಶುಲ್ಕ, ನೋಂದಣಿ ಶುಲ್ಕ ಭಾರತ ಸೇವಾದಳ ಸೇರಿದಂತೆ 18 ರೀತಿಯ ಶುಲ್ಕಗಳನ್ನು ಒಟ್ಟುಗೂಡಿಸಿ ಕಲಾ ವಿದ್ಯಾರ್ಥಿಗಳಿಗೆ 2121 ರೂಪಾಯಿ, ವಿಜ್ಞಾನ ವಿಭಾಗಕ್ಕೆ 2607 ರೂ., ವಾಣಿಜ್ಯ ವಿಭಾಗಕ್ಕೆ 2121 ರೂ. ಶುಲ್ಕ ನಿಗದಿ ಮಾಡಿದೆ. ಇದರೊಂದಿಗೆ ಬಂಡವಾಳ ವೆಚ್ಚ, ವಿಶೇಷ ಅಭಿವೃದ್ಧಿ ಶುಲ್ಕ ಪಡೆಯಲು ಅವಕಾಶವಿದೆ. ಇದು 10 ಸಾವಿರ ರೂಪಾಯಿವರೆಗೂ ಆಗಬಹುದು.
ಆದರೆ, ಹೆಚ್ಚಿನ ಖಾಸಗಿ ಕಾಲೇಜುಗಳಲ್ಲಿ 40,000 ರೂ.ನಿಂದ 1.5 ಲಕ್ಷ ರೂಪಾಯಿವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಅಂಕ ಪಡೆದರೂ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವಂತಾಗಿದೆ. ಗ್ರಂಥಾಲಯ ಶುಲ್ಕ, ಸಮವಸ್ತ್ರ, ಬುಕ್ಸ್, ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕಗಳನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿದ ಶುಲ್ಕ ಪಡೆದು ಕಾಲೇಜುಗಳನ್ನು ನಡೆಸುವುದು ಕಷ್ಟ. ಉಪನ್ಯಾಸಕರಿಗೆ ವೇತನ ಕೊಡಲು ಕೂಡ ಹಣ ಸಾಕಾಗುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರಣ ಕಾಲೇಜು ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಸೌಲಭ್ಯ ಕಲ್ಪಿಸಲು ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ.
ಕೆಲವು ಕಾಲೇಜುಗಳಲ್ಲಿ ಕಲಾ ವಿಭಾಗಕ್ಕೆ 40ರಿಂದ 50 ಸಾವಿರ ರೂ., ವಿಜ್ಞಾನ ವಿಭಾಗಕ್ಕೆ 50 ರಿಂದ 75 ಸಾವಿರ ರೂ., ವಾಣಿಜ್ಯ ವಿಭಾಗಕ್ಕೆ 60ರಿಂದ 70 ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.