ಬೆಂಗಳೂರು: 2021 ರ ಕೆಎಎಸ್ ಮುಖ್ಯ ಪರೀಕ್ಷೆ ಮೌಲ್ಯಮಾಪನ ವಿಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಕೆ.ಪಿ.ಎಸ್.ಸಿ. ಮುಖ್ಯದ್ವಾರದಲ್ಲಿ ಮಾಹಿತಿ ಪಡೆಯಲು ಶಾಸಕ ಸುರೇಶ್ ಕುಮಾರ್ ನಿಲ್ಲಲಿದ್ದಾರೆ.
ಮೇ 31 ರಂದು ಬೆಳಗ್ಗೆ 10 ಗಂಟೆಗೆ ಕೆ.ಪಿ.ಎಸ್.ಸಿ.ಗೆ ತೆರಳಲಿರುವ ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾಹಿತಿ ಪಡೆಯಲು ಕೆ.ಪಿ.ಎಸ್.ಸಿ. ಕಚೇರಿ ಎದುರು ನಿಲ್ಲಲಿದ್ದಾರೆ.
ಕಳೆದ 10 ವರ್ಷದ ಅವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನಾಗರಿಕ ಸೇವೆಗಳ ಪರೀಕ್ಷೆಗಳಿಗಾಗಿ ಕೇವಲ ನಾಲ್ಕು ಬಾರಿ ಮಾತ್ರ ಪರೀಕ್ಷೆ ನಡೆಸಲಾಗಿದೆ. 106 ಹುದ್ದೆಗಳಿಗೆ 2017ನೇ ಸಾಲಿನ ಅಧಿಸೂಚನೆ ಪ್ರಕಟವಾಗಿದ್ದು, 2020 ನೇ ಸಾಲಿನ ಫೆಬ್ರವರಿಯಲ್ಲಿ 1.67 ಲಕ್ಷ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 2200 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.
ಈ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ನಡೆದಿದ್ದು ಆಗಸ್ಟ್ 24, 2020 ರಂದು. ಮುಖ್ಯ ಪರೀಕ್ಷೆಗಳು 2021 ನೇ ಫೆಬ್ರವರಿ 13 ರಿಂದ 16ರವರೆಗೆ ನಡೆದಿವೆ. ಪರೀಕ್ಷೆ ನಡೆದು 15 ತಿಂಗಳು ಕಳೆದರೂ ಇದುವರೆಗೂ ಫಲಿತಾಂಶ ಪ್ರಕಟಿಸಿಲ್ಲ ಎನ್ನಲಾಗಿದೆ.