ಸ್ವಇಚ್ಛೆಯಿಂದ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವವರ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಅಥವಾ ಕ್ರಿಮಿನಲ್ ಕೈಗೊಳ್ಳಲು ಹೋಗಬಾರದು ಎಂದು ಪೊಲೀಸರಿಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ವೇಶ್ಯಾವಾಟಿಕೆ ಎನ್ನುವುದು ಒಂದು ವೃತ್ತಿಯಾಗಿದೆ. ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಅಡಿಯಲ್ಲಿ ಘನತೆ ಹಾಗೂ ಸಮಾನ ರಕ್ಷಣೆಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಲೈಂಗಿಕ ಕಾರ್ಯಕರ್ತರ ಹಕ್ಕುಗಳನ್ನು ರಕ್ಷಿಸಲು ಆರು ನಿರ್ದೇಶನಗಳನ್ನು ನೀಡಿದೆ. ಪೀಠವು, ಲೈಂಗಿಕ ಕಾರ್ಯಕರ್ತರು ಕಾನೂನಿನ ಸಮಾನ ರಕ್ಷಣೆಗೆ ಅರ್ಹರಾಗಿರುತ್ತಾರೆ. ಕ್ರಿಮಿನಲ್ ಕಾನೂನು ಎಲ್ಲಾ ಪ್ರಕರಣಗಳಲ್ಲಿ ವಯಸ್ಸು ಮತ್ತು ಒಪ್ಪಿಗೆಯ ಆಧಾರದ ಮೇಲೆ ಸಮಾನವಾಗಿ ಅನ್ವಯಿಸಬೇಕು. ಲೈಂಗಿಕ ಕಾರ್ಯಕರ್ತೆಯು ವಯಸ್ಕರಾಗಿದ್ದು, ಒಪ್ಪಿಗೆಯೊಂದಿಗೆ ಈ ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾದಾಗ, ಪೊಲೀಸರು ಮಧ್ಯಪ್ರವೇಶಿಸುವುದರಿಂದ ಅಥವಾ ಯಾವುದೇ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವುದನ್ನು ತಡೆಯಬೇಕು. ವೃತ್ತಿಯ ಹೊರತಾಗಿಯೂ, ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಈ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾದ ಜೀವನವನ್ನು ಹೊಂದುವ ಹಕ್ಕಿದೆ ಎಂದು ಹೇಳಿದೆ.
ಸ್ವಯಂ ಪ್ರೇರಿತ ವೇಶ್ಯಾವಾಟಿಕೆ ಕೆಲಸವು ಕಾನೂನು ಬಾಹಿರವಲ್ಲ. ಆದರೆ ವೇಶ್ಯಾಗೃಹಗಳನ್ನು ನಡೆಸುವುದು ಕಾನೂನು ಬಾಹಿರವಾಗಿರುವುದರಿಂದ ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಿದಂತಹ ಸಂದರ್ಭಗಳಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ. ದಂಡ ವಿಧಿಸುವಂತಿಲ್ಲ, ಕಿರುಕುಳ ನೀಡುವಂತಿಲ್ಲ ಎಂದು ನ್ಯಾಯಪೀಠವು ಹೇಳಿದೆ.
ಲೈಂಗಿಕ ಕಾರ್ಯದಲ್ಲಿ ತೊಡಗುತ್ತಾಳೆ ಎಂಬ ಒಂದೇ ಕಾರಣಕ್ಕೆ ವೇಶ್ಯೆಯಿಂದ ಆಕೆಯ ಮಗುವನ್ನು ಬೇರ್ಪಡಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಭ್ಯತೆ ಹಾಗೂ ಘನತೆಯ ಹಕ್ಕು ಲೈಂಗಿಕ ಕಾರ್ಯಕರ್ತೆಯರಂತೆ ಅವರ ಮಕ್ಕಳಿಗೂ ವಿಸ್ತರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಪ್ರಾಪ್ತ ಮಗುವು ಲೈಂಗಿಕ ಕಾರ್ಯಕರ್ತೆಯರ ಜೊತೆಯಲ್ಲಿ ವಾಸಿಸುತ್ತಿರುವುದು ಕಂಡು ಬಂದಲ್ಲಿ ಮಾನವ ಕಳ್ಳ ಸಾಗಣೆ ನಡೆದಿದೆ ಎಂದು ಭಾವಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.