ಶಿಮ್ಲಾ: ನಿಮ್ಮ ಬಾಲ್ಯದಲ್ಲಿ ಟೋಪಿ ಬೇಕಾ ಟೋಪಿ….. ಎಂಥಾ ಟೋಪಿ…..ಎಂದು ಹೇಳುತ್ತಾ ಆಟವಾಡಿರುವುದು ನಿಮಗೆ ನೆನಪಿದೆಯೇ..? ಇವೆಲ್ಲಾ ಕಳೆದು ಹೋಗಿರುವ ಅತ್ಯಂತ ಮಧುರ ಕ್ಷಣಗಳಾಗಿವೆ. ಅಂದಹಾಗೆ, ಈ ಆಟವನ್ನು ಐಟಿಬಿಪಿ ಯೋಧರು ಮತ್ತೆ ನೆನಪಿಸಿದ್ದಾರೆ.
ಹೌದು, ಹಿಮಾಚಲ ಪ್ರದೇಶದ ಎತ್ತರದ ಹಿಮಾಲಯದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರು, ಮಕ್ಕಳ ಆಟವನ್ನು ಆಡುತ್ತಿರುವುದು ಕಂಡುಬಂದಿದೆ. ಈ ಪ್ರದೇಶದಲ್ಲಿ ತಾಜಾ ಹಿಮಪಾತದ ನಂತರ ಹೆಪ್ಪುಗಟ್ಟುವ ತಾಪಮಾನದಲ್ಲಿ ಆಟವಾಡುತ್ತಿದ್ದ ಯೋಧರು, ಪ್ಯಾಡ್ಡ್ ಜಾಕೆಟ್‌ಗಳು ಮತ್ತು ಬೂಟುಗಳನ್ನು ಧರಿಸಿದ್ದರು.
ಐಟಿಬಿಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹಿಮವೀರರು ಕರವಸ್ತ್ರದ ಆಟವನ್ನು ಆಡಿದ್ದಾರೆ. ಸೈನಿಕರು ಹಿಮದಲ್ಲಿ ವೃತ್ತಾಕಾರವಾಗಿ ಕುಳಿತಿದ್ದರೆ, ಒಬ್ಬ ಸೈನಿಕ ಕರವಸ್ತ್ರವನ್ನು ಮತ್ತೊಬ್ಬನ ಹಿಂದೆ ಇಟ್ಟು ಓಡಿದ್ದಾರೆ. ಆತನನ್ನು ಬೆನ್ನಟ್ಟುವ ಸಲುವಾಗಿ ಮತ್ತೊಬ್ಬ ಸೈನಿಕ ವೃತ್ತಾಕಾರವಾಗಿ ಓಡಿದ್ದಾರೆ.
ಬಾಲ್ಯದ ಆಟವನ್ನು ಆಡಿರುವ ಯೋಧರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ಈ ವಿಡಿಯೋ ನೋಡುತ್ತಿದ್ದಂತೆ ಎಲ್ಲರೂ ತಮ್ಮ ಬಾಲ್ಯವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಹಿಮಾಚಲದಲ್ಲಿರುವ ಐಟಿಬಿಪಿ ಯೋಧರು ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 14,000 ಅಡಿ ಎತ್ತರದಲ್ಲಿ ಗಡಿಗಳಲ್ಲಿ ಗಸ್ತು ತಿರುಗಬೇಕಾಗುತ್ತದೆ. ಅವರು ತಮ್ಮ ದೈಹಿಕ ತರಬೇತಿ ಮತ್ತು ಇತರ ಚಟುವಟಿಕೆಗಳನ್ನು ಹಿಮದಲ್ಲೇ ಮಾಡುತ್ತಾರೆ.