ಪಾಟ್ನಾ: ಬಾಲಕಿಯೊಬ್ಬಳು ತನ್ನ ಒಂದೇ ಕಾಲಿನಲ್ಲಿ ಕುಂಟುತ್ತಾ ಶಾಲೆಗೆ ಹೋಗುತ್ತಿರುವ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಬಿಹಾರದ ಜಮುಯಿಯ ಬಾಲಕಿಯೊಬ್ಬಳ ಈ ಹೃದಯಸ್ಪರ್ಶಿ ಕಥೆಗೆ ನೆಟ್ಟಿಗರು ತಲ್ಲಣಗೊಂಡಿದ್ದಾರೆ. ಸೀಮಾ ಎಂಬ 10 ವರ್ಷದ ಬಾಲಕಿಯ ಶಿಕ್ಷಣದ ಉತ್ಸಾಹವು ನೆಟ್ಟಿಗರ ಹೃದಯ ಗೆದ್ದಿದೆ. ಸೀಮಾ ತನ್ನ ಮನೆಯಿಂದ ಒಂದು ಕಿ.ಮೀ ದೂರದಲ್ಲಿರುವ ಹಳ್ಳಿಯ ಶಾಲೆಗೆ ಒಂದೇ ಕಾಲಿನಲ್ಲಿ ಕುಂಟುತ್ತಾ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೀಮಾ ಶಾಲಾ ಸಮವಸ್ತ್ರ ಧರಿಸಿದ್ದು, ಬೆನ್ನಿನಲ್ಲಿ ಬ್ಯಾಗ್ ಹಾಕಿಕೊಂಡು ಒಂದು ಕಾಲಿನ ಮೇಲೆ ಜಿಗಿಯುತ್ತಾ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಬಾಲಕಿಯ ಕಥೆಯು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಬಾಲಿವುಡ್ ನಟ ಸೋನು ಸೂದ್ ಅವರು ಈ ವಿಡಿಯೋ ಗಮನಿಸಿದ್ದು, ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ, ಬಾಲಕಿಗೆ ಸೀಮಾಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸೋನು ಸೂದ್, ಸೀಮಾ ಶೀಘ್ರದಲ್ಲೇ ತನ್ನ ಎರಡೂ ಕಾಲುಗಳೊಂದಿಗೆ ಶಾಲೆಗೆ ಹೋಗುತ್ತಾಳೆ ಎಂದು ಭರವಸೆ ನೀಡಿದ್ದಾರೆ. ಆಕೆಗೆ ಕೃತಕ ಕಾಲು ಜೋಡಿಸಲು ಸಹಾಯ ಮಾಡುವುದಾಗಿ ಸೋನು ಸೂದ್ ತಿಳಿಸಿದ್ದಾರೆ.
ತಾನು ದೊಡ್ಡವಳಾದ ಬಳಿಕ ಶಿಕ್ಷಕಿಯಾಗಬೇಕೆಂಬ ಕನಸು ಹೊಂದಿರುವ ಸೀಮಾ, ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಳು. ಆದರೆ, ಇದರಿಂದ ಧೃತಿಗೆಡದ ಬಾಲಕಿ ತನ್ನ ಓದುವ ಆಸೆಯಿಂದ ಒಂದೇ ಕಾಲಿನಲ್ಲಿ ಉತ್ಸಾಹದಿಂದ ಶಾಲೆಗೆ ತೆರಳುತ್ತಾಳೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಸೀಮಾ ಅವರ ವೈರಲ್ ವಿಡಿಯೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅದು ಅವರನ್ನು ಭಾವನಾತ್ಮಕವಾಗಿಸಿದೆ ಎಂದು ಹೇಳಿದ್ದಾರೆ.