ಮುಂಬೈ: ಹೆಲ್ಮೆಟ್ ರಹಿತ ಸವಾರರಿಗೆ ಮುಂಬೈ ಪೊಲೀಸರು ನಿಯಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇನ್ಮುಂದೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದವರಿಗೆ 500 ರೂ. ದಂಡ ಮತ್ತು 3 ತಿಂಗಳ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.
“ದ್ವಿಚಕ್ರ ವಾಹನವನ್ನು ಓಡಿಸುವ ಸವಾರರು ಮತ್ತೆ ಅವರ ಹಿಂಬದಿ ಕುಳಿತವರೂ ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಈ ನಿಯಮವನ್ನು ಉಲ್ಲಂಘಿಸುವ ಹಿಂಬದಿ ಸವಾರರಿಗೂ ಸಹ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಈ ಬಗ್ಗೆ ಮುಂಬೈ ಪೊಲೀಸರು ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಸುತ್ತೋಲೆಯನ್ನು ಹಂಚಿಕೊಂಡಿದ್ದಾರೆ. ಸುತ್ತೋಲೆಯ ಪ್ರಕಾರ, ಸೈಕ್ಲಿಸ್ಟ್ಗಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗುವುದು ಎನ್ನಲಾಗಿದೆ.
ಕಳೆದ ತಿಂಗಳು ಹೆಲ್ಮೆಟ್ ರಹಿತ ಸವಾರರ ವಿರುದ್ಧ ಸಂಚಾರ ಪೊಲೀಸರು 75,000 ಚಲನ್ಗಳನ್ನು ದಾಖಲಿಸಿದ್ದಾರೆ ಎಂದು ಡಿಸಿಪಿ (ಟ್ರಾಫಿಕ್) ರಾಜ್ ತಿಲಕ್ ರೋಷನ್ ಬಹಿರಂಗಪಡಿಸಿದ್ದಾರೆ.
ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ ಅವರ ಪರವಾನಗಿಯನ್ನು 3 ತಿಂಗಳವರೆಗೆ ಅಮಾನತುಗೊಳಿಸಲಾಗುತ್ತದೆ. ಅಂಥವರನ್ನು ಹತ್ತಿರದ ಟ್ರಾಫಿಕ್ ಚೌಕಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ರಕ್ಷಣಾತ್ಮಕ ಚಾಲನೆ ಮತ್ತು ಸಂಚಾರ ನಿಯಮಗಳ ಕುರಿತು 2 ಗಂಟೆಗಳ ವಿಡಿಯೋಗಳನ್ನು ವೀಕ್ಷಿಸಬೇಕಾಗುತ್ತದೆ.