ನವದೆಹಲಿ: ಪ್ರತ್ಯೇಕತಾವಾದಿ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್(ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್(56) ಅವರು ತಪ್ಪೊಪ್ಪಿಕೊಂಡ ಒಂದು ವಾರದ ನಂತರ ದೆಹಲಿ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಾರ್ಚ್ ನಲ್ಲಿ ದೋಷಾರೋಪಣೆ ಮಾಡಿದ ನಂತರ ಮೇ 10 ರಂದು ಮಲಿಕ್ ಅವರು ಎಲ್ಲಾ ಆರೋಪಗಳಿಗೆ ತಪ್ಪೊಪ್ಪಿಕೊಂಡರು. ಯಾವುದೇ ಆರೋಪಗಳನ್ನು ಪ್ರಶ್ನಿಸುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಯಾಸಿನ್ ಮಲಿಕ್ ವಿರುದ್ಧದ ಪ್ರಕರಣವು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರ ಪ್ರತ್ಯೇಕತಾವಾದಿ ನಾಯಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗಾಗಿ ದೇಶೀಯವಾಗಿ ಮತ್ತು ವಿದೇಶದಿಂದ ಹಣವನ್ನು ಸಂಗ್ರಹಿಸಲು, ಸ್ವೀಕರಿಸಲು ನಡೆಸಿದ ಸಂಚಿಗೆ ಸಂಬಂಧಿಸಿದೆ.
ಯಾಸಿನ್ ಮಲಿಕ್ ಗೆ ಗರಿಷ್ಠ ಶಿಕ್ಷೆ, ಮರಣದಂಡನೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಒತ್ತಾಯಿಸಿತ್ತು, ಭಯೋತ್ಪಾದನೆ, ನಿಧಿ ಸಂಗ್ರಹ ಪ್ರಕರಣದಲ್ಲಿ ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ಎಲ್ಲಾ ಆರೋಪಗಳಿಗೆ ಮಲಿಕ್ ಈ ಹಿಂದೆ ತಪ್ಪೊಪ್ಪಿಕೊಂಡಿದ್ದರು. ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ ಇಂದು ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.