ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳತೊಡಗಿದೆ. ಗೋಧಿ ರಫ್ತು ಮಾಡಲು ನಿರ್ಬಂಧ ಹೇರಿದ್ದ ಸರ್ಕಾರ ಈಗ ಸಕ್ಕರೆ ರಫ್ತು ಮಾಡಲು ಕೂಡ ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆಸಿದೆ.
ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆಗೆ ಸರ್ಕಾರ ಮುಂದಾಗಿದ್ದು, ಇದರಿಂದ ಅಡುಗೆ ಎಣ್ಣೆ ದರ ಕಡಿಮೆಯಾಗಲಿದೆ.
ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿರುವ ಭಾರತ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಣದುಬ್ಬರ ತಡೆಗೆ ಸಕ್ಕರೆ ರಫ್ತಿಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಆಹಾರ ಪದಾರ್ಥಗಳ ಬೆಲೆ ಇಳಿಕೆ ನಿಟ್ಟಿನಲ್ಲಿ ಸೂರ್ಯಕಾಂತಿ ಮತ್ತು ಸೋಯಾಬಿನ್ ಎಣ್ಣೆಗಳ ಮೇಲಿನ ಆಮದು ಸುಂಕ ಕಡಿತ ಮಾಡಲು ಸರ್ಕಾರ ಮುಂದಾಗಿದೆ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಪ್ರಸ್ತುತ ಶೇಕಡ 5 ರಷ್ಟು ಇದೆ. ಅದನ್ನು ಸಂಪೂರ್ಣ ಕೈಬಿಡಲು ಸರ್ಕಾರ ನಿರ್ಧರಿಸಿದ್ದು, ಈ ವಾರದೊಳಗೆ ತೀರ್ಮಾನ ಹೊರಬೀಳಲಿದೆ.
ಕೇಂದ್ರ ಸರ್ಕಾರ ಈಗಾಗಲೇ ತಾಳೆ ಎಣ್ಣೆ ಮತ್ತು ಸೋಯಾಬಿನ್ ಸೇರಿದಂತೆ ಖಾದ್ಯ ತೈಲಗಳ ಮೇಲಿನ ಮೂಲ ಆಮದು ಸುಂಕಗಳನ್ನು ತೆರವುಗೊಳಿಸಿದೆ. ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ನಿಷೇಧ ಹೇರಿದಲ್ಲಿ ದೇಶಿಯವಾಗಿ ಸಕ್ಕರೆ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ಅನುಕೂಲವಾಗುತ್ತದೆ. ಆದರೆ, ಕಬ್ಬು ದರ ಕಡಿಮೆಯಾಗಿ ಬೆಳೆಗಾರರಿಗೆ ನಷ್ಟವಾಗಲಿದೆ ಎಂದು ಹೇಳಲಾಗಿದೆ.