ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿಯವರು ಭಾರತದ ಕಲ್ಪನೆಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ `ಇಂಡಿಯಾ @ 75’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ನರೇಂದ್ರ ಮೋದಿಯವರು ಭಾರತವನ್ನು ಒಳಗೊಳ್ಳದ ಮತ್ತು ದೇಶದ ಜನಸಂಖ್ಯೆಯ ಬಹುಭಾಗವನ್ನು ಹೊರಗಿಡುವ ಮನಸ್ಥಿತಿಯನ್ನು ಹೊಂದಿದ್ದಾರೆ. ಇದು ಮೋದಿಯವರು ದೇಶಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ದೇಶದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಜನರನ್ನು ಹೊರಗಿಟ್ಟು ಭಾರತದ ನಿರ್ಮಾಣದ ದೃಷ್ಟಿ ಇಟ್ಟುಕೊಂಡಿದ್ದರೆ ಅದು ನನಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ವೇಳೆ ಯಾರನ್ನು ಹೊರಗಿಡಲಾಗುತ್ತದೆ ಎಂದು ನಾನು ಅಂಜುವುದಿಲ್ಲ. ನನಗೆ ಅಲ್ಲೊಂದು ಸಮಸ್ಯೆ ಕಾಣುತ್ತಿರುತ್ತದೆ. ಈ ದೃಷ್ಟಿಕೋನದಿಂದ ಬಹುಪಾಲು ಜನರಿಗೆ ಅನ್ಯಾಯವಾಗಿದೆ. ಹೊರಗಿಡಲ್ಪಡುವ ಜನರಲ್ಲಿರುವ ಅಪಾರವಾದ ಶಕ್ತಿಯನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನೀವು ಪ್ರತಿಯೊಬ್ಬ ವ್ಯಕ್ತಿಯನ್ನೂ ಸಹಾನುಭೂತಿಯಿಂದ ಕಾಣಬೇಕು. ಆದರೆ, ಮೋದಿಯವರು ನಮ್ಮ ದೊಡ್ಡ ಮಟ್ಟದ ಜನಸಂಖ್ಯೆಯನ್ನು ಹೊರಗಿಟ್ಟು ಭಾರತದ ದೃಷ್ಟಿಕೋನವನ್ನು ನಿರ್ಮಾಣ ಮಾಡಲು ಹೊರಟಿರುವುದು ತಪ್ಪು. ಅದು ಭಾರತದ ದೃಷ್ಟಿಕೋನವಲ್ಲ. ಬದಲಿಗೆ ಮೋದಿಯವರ ದೃಷ್ಟಿಕೋನವಾಗಿದೆ ಎಂದು ಟೀಕಿಸಿದರು.