ಮೈಸೂರು: ಹಸೆಮಣೆಯಲ್ಲಿ ಮದುಮಗ ತಾಳಿ ಕಟ್ಟುವ ವೇಳೆಯಲ್ಲಿಯೇ ವಧು ಕುಸಿದು ಬಿದ್ದಂತೆ ನಟಿಸಿ ಮದುವೆಯನ್ನು ತಪ್ಪಿಸಿಕೊಂಡಿದ್ದಾಳೆ. ಪ್ರಮಾದಕ್ಕೆ ಕ್ಷಮೆಯಾಚಿಸಿದ ವಧುವಿನ ಪೋಷಕರು ಮದುವೆಗೆ ವೆಚ್ಚ ಮಾಡಿದ ಹಣವನ್ನು ವರನ ಪೋಷಕರಿಗೆ ಹಿಂದಿರುಗಿಸಿದ್ದಾರೆ.
ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿ ಎಂದು ಹೇಳಿದ ವಧು ಮದುವೆಯಾಗಲು ನಿರಾಕರಿಸಿದ್ದು, ಇದರಿಂದ ಆಕ್ರೋಶಗೊಂಡ ವರನ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆದು ವಧುವಿನ ಕಡೆಯವರು ವರನಿಗೆ ಹಣ ಹಿಂತಿರುಗಿಸಿದ್ದಾರೆ. ಅಲ್ಲದೆ, ವಧುವಿಗೆ ನೀಡಿದ್ದ ಚಿನ್ನಾಭರಣಗಳನ್ನು ವಾಪಸ್ ಕೊಟ್ಟಿದ್ದು ಮದುವೆ ಮುರಿದು ಬಿದ್ದಿದೆ.
ಮೈಸೂರಿನ ಸುಣ್ಣದ ಕೇರಿಯ ವಧುವಿಗೆ ಹೆಚ್.ಡಿ. ಕೋಟೆಯ ವರನೊಂದಿಗೆ ಮೈಸೂರಿನ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು. ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಕುಸಿದು ಬಿದ್ದಂತೆ ನಟಿಸಿದ್ದಾಳೆ. ನೆರೆಮನೆಯ ಯುವಕನನ್ನು ಪ್ರೀತಿಸಿದ್ದ ಯುವತಿ ಪೋಷಕರ ಬಲವಂತದಿಂದ ಮದುವೆಗೆ ಒಪ್ಪಿಕೊಂಡಿದ್ದಳು. ವರನಿಗೆ ಸಂದೇಶ ಕಳುಹಿಸಿದ್ದ ಪ್ರಿಯಕರ ಮದುವೆಯಾಗದಂತೆ ಒತ್ತಡ ಹೇರಿದ್ದ. ಈ ಬಗ್ಗೆ ವಿಚಾರಿಸಿದಾಗ ಯುವತಿ ತನಗೂ ಮೊಬೈಲ್ ಸಂದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಳು.
ಭಾನುವಾರ ಮದುವೆ ನಡೆಯುವ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಂತೆ ನಟಿಸಿದ್ದಾಳೆ. ಮದುವೆಗೆ ಬಂದವರು ವಿಚಾರಿಸಿದಾಗ ತನಗೆ ಮದುವೆ ಬೇಡ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಲಿ ಎಂದು ಹಠ ಹಿಡಿದಿದ್ದಾಳೆ. ಇದರಿಂದ ಆಕ್ರೋಶಗೊಂಡ ವರನ ಪೋಷಕರು ಗಲಾಟೆ ಮಾಡಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯಿತಿ ನಡೆದ ವಧುವಿನ ಕಡೆಯವರು ಹಣ, ಚಿನ್ನಾಭರಣಗಳನ್ನು ವಾಪಸ್ ಕೊಟ್ಟಿದ್ದಾರೆ.