ಬಿಹಾರದ ಮಾಜಿ ಸಿಎಂ, RJD ಮುಖ್ಯಸ್ಥ ಲಾಲು ಪ್ರಸಾದ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ರಾಜಕಾರಣಿಗಿಂತಲೂ ಹೆಚ್ಚಾಗಿ, ಮಾತನಾಡುವ ವೈಖರಿಗೇನೇ ಹೆಚ್ಚು ಫೇಮಸ್ ಆದವರು. ಅದಕ್ಕಿಂತಲೂ ಹೆಚ್ಚಾಗಿ ಫೇಮಸ್ ಆಗಿದ್ದು ಸರಣಿ ಹಗರಣಗಳಿಗೆ. ಈಗ ಇದೇ ಲಾಲುಪ್ರಸಾದ್ ಹಾಗೂ ಅವರ ಕುಟುಂಬದ ವಿರುದ್ಧ ಮತ್ತೊಂದು ಹೊಸ ಆರೋಪ ಕೇಳಿ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಲಾಲೂ ನಿವಾಸ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಸಿಬಿಐ ನಡೆಸಿದ ದಾಳಿ ಆರ್ಜೆಡಿ ಕಾರ್ಯಕರ್ತರಿಗೆ ಅಸಮಾಧಾನ ಉಂಟು ಮಾಡಿದೆ. ಸಿಬಿಐ ಅಧಿಕಾರಿಗಳ ವಿರುದ್ಧವೇ ಆರ್ಜೆಡಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಕಾರ್ಯಕರ್ತರ ವರ್ತನೆಯಿಂದ ಬೇಸತ್ತ ರಾಬ್ರಿದೇವಿಯವರು ಪಕ್ಷದ ಕಾರ್ಯಕರ್ತನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡ್ತಿದೆ.
ಅಸಲಿಗೆ, ಪಾಟ್ನಾದಲ್ಲಿರೋ ಲಾಲುಪ್ರಸಾದ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು. ಸುಮಾರು 13 ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಸಿಬಿಐ ಮನೆಯನ್ನ ಜಾಲಾಡಿದ್ದಾರೆ. ಸಿಬಿಐ ಅಧಿಕಾರಿಗಳು ಮನೆಯಿಂದ ಹೊರಬಂದಾಗ ಅಲ್ಲೇ ಇದ್ದ RJD ಕಾರ್ಯಕರ್ತರು ಸಿಬಿಐ ವಾಹನವನ್ನ ಮುತ್ತಿಗೆ ಹಾಕಿದ್ದಾರೆ. ಅಷ್ಟೆ ಅಲ್ಲ ಸಿಬಿಐ ವಿರುದ್ಧ ಧಿಕ್ಕಾರ ಹಾಕಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗ್ತಿದ್ದ ಹಾಗೆಯೇ, ಸಿಬಿಐ ಅಧಿಕಾರಿಗಳ ರಕ್ಷಣೆಗೆ ಪೊಲೀಸ್ ಪಡೆಯೇ ಬರಬೇಕಾಯಿತು. ಎಎಸ್ಪಿ ಕಾಮ್ಯಾ ಮಿಶ್ರಾ ಅವರು ಸ್ಥಳಕ್ಕೆ ಬಂದು ಸಿಬಿಐ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದರು.
ಕುಡಿದ ಅಮಲಿನಲ್ಲಿ ಡಬಲ್ ಡೆಕ್ಕರ್ ಬಸ್ ಚಲಾಯಿಸಿ ಮನೆಗೆ ತಲುಪಿದ ಭೂಪ..!
ರಾಬ್ರಿ ದೇವಿಯವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿರೋದು RJD ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕಾಗಿ ಸಿಬಿಐ ಅಧಿಕಾರಿಗಳನ್ನ ಅಟ್ಟಾಡಿಸಿಕೊಂಡು ಹೋಗಿ ಹೊಡೆಯಲು ಪ್ರಯತ್ನ ಪಟ್ಟಿದ್ದಾರೆ. ಕಾರ್ಯಕರ್ತರ ಈ ಕೃತ್ಯವನ್ನು ನೋಡಿ ಖುದ್ದು ರಾಬ್ರಿದೇವಿಯವರೇ ಮನೆಯಿಂದ ಹೊರಬಂದಿದ್ದಾರೆ. ಅವರ ಜೊತೆ ಮಗ ತೇಜ್ ಪ್ರತಾಪ್ ಅವರು ಕೂಡಾ ಬಂದಿದ್ದಾರೆ. RJD ಕಾರ್ಯಕರ್ತರಿಗೆ ಮೊದಲು ಮಾತಿನಿಂದ ಸಮಾಧಾನ ಪಡಿಸಲು ನೋಡಿದ್ದಾರೆ. ಆದರೂ ಶಾಂತವಾಗದ RJD ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ ರಾಬ್ರಿದೇವಿ. ಇದೇ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ.