ಬೆಂಗಳೂರು: ಮಳೆ ಅನಾಹುತದಿಂದಾಗಿ ರಾಜಧಾನಿ ಬೆಂಗಳೂರು ಜನತೆ ಸಂಕಷ್ಟಕ್ಕೀಡಾಗಿದ್ದು, ರಾಜಕೀಯ ಪಕ್ಷದ ನಾಯಕರು ಮಳೆಹಾನಿ ಪರಿಶೀಲನೆ ನಡೆಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಿಟಿ ರೌಂಡ್ಸ್ ಹಾಕಿ ಜನರ ಸಂಕಷ್ಟ ಆಲಿಸಿದ್ದಾರೆ.
ಎರಡು ದಿನಗಳಿಂದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮಳೆಯ ಮುನ್ಸೂಚನೆ ನೀಡಿದ್ದರೂ ರಾಜ್ಯ ಸರ್ಕಾರ, ಸಚಿವರು ಕಣ್ಮುಚ್ಚಿ ಕುಳಿತಿದ್ದರು. ಈಗ ಕಾಟಾಚಾರಕ್ಕಾಗಿ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಯಾರೊಬ್ಬರೂ ಗಂಭೀರವಾಗಿ ಜನರ ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಕ್ಕಿಗೆ ನೀರು ಕೊಟ್ಟ ಮಾನವಿಯತೆ ಮೆರೆದ ವ್ಯಕ್ತಿ: ಶಹಬ್ಬಾಷ್ ಅಂದ IAS ಅಧಿಕಾರಿ
ಇದೇ ವೇಳೆ ಸಚಿವ ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಸೋಮಣ್ಣರಿಂದ ನಾನು ಬೆಂಗಳೂರಿನ ಬಗ್ಗೆ ತಿಳಿದುಕೊಳ್ಳಬೇಕಿಲ್ಲ. ರಾಜಕಾಲುವೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. 5 ವರ್ಷಗಳಿಂದ ಬಿಜೆಪಿ ಸರ್ಕಾರ ಹಿಟಾಚಿಯಲ್ಲಿಯೇ ಬಾಚಿ ತೆಗೆಯುತ್ತಿದೆ. ಮಳೆಯಿಂದಾಗಿ ಸಿಲಿಕಾನ್ ಸಿಟಿ ಸ್ವಿಮ್ಮಿಂಗ್ ಪೂಲ್ ನಂತಾಗಿದೆ. ಇಷ್ಟಾದರೂ ಸಚಿವರಿಗೆ ಸಮಸ್ಯೆ ಕಾಣುತ್ತಿಲ್ಲವೇ? ಪ್ರಧಾನಿ ಮೋದಿ ಹೆಸರಲ್ಲಿ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ. ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.
1600 ಕೋಟಿ ಹಣ ಕೊಡುತ್ತೀವಿ ಎಂದು ಈಗ ಸಿಎಂ ಹೇಳಿದ್ದಾರೆ. 5 ವರ್ಷಗಳಿಂದ ಏನು ಮಾಡಿದರು? ಎಂದು ಪ್ರಶ್ನಿಸಿದ್ದಾರೆ. ನಾನು ಬೆಂಗಳೂರು ರೌಂಡ್ಸ್ ಹೋಗಿ ಜನರ ಸಮಸ್ಯೆಯನ್ನು ಖುದ್ದಾಗಿ ಆಲಿಸುತ್ತೇನೆ. ಬೆಂಗಳೂರಿಗಾಗಿಯೇ ಜೆಡಿಎಸ್ ಹೊಸ ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಎಂದು ಹೇಳಿದರು.