ದಾವಣಗೆರೆ: ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಮದುವೆ ಮನೆಯಲ್ಲಿ ಮಹಿಳೆಯರೊಂದಿಗೆ ಕುಳಿತು ಕರಿಮಣಿ ತಾಳಿ ಸರ ಪೋಣಿಸುವ ಮೂಲಕ ಗಮನಸೆಳೆದರು.
ಹೊನ್ನಾಳಿ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ನೆರೆ ಹಾನಿ ಉಂಟಾಗಿದ್ದು, ವಿವಿಧ ಗ್ರಾಮಗಳಿಗೆ ಅಧಿಕಾರಿಗಳ ತಂಡದೊಂದಿಗೆ ತೆರಳಿ ರೇಣುಕಾಚಾರ್ಯ ಪರಿಶೀಲನೆ ನಡೆಸಿದ್ದಾರೆ. ತರಗನಹಳ್ಳಿ ಸಮುದಾಯಭವನದಲ್ಲಿ ಪಕ್ಷದ ಮುಖಂಡ ಲೋಹಿತ್ ಸಹೋದರ ಬಸವರಾಜ್ ಮದುವೆ ನಡೆಯುತ್ತಿತ್ತು.
ಗ್ರಾಮದ ದೇವಾಲಯದಲ್ಲಿ ಮಹಿಳೆಯರು ತಾಳಿ ಪೋಣಿಸುವುದನ್ನು ಗಮನಿಸಿದ ರೇಣುಕಾಚಾರ್ಯ ಅಲ್ಲಿಗೆ ತೆರಳಿದ್ದಾರೆ. ತಾಳಿ ಪೋಣಿಸುತ್ತಿದ್ದ ಮಹಿಳೆಯರು ಸಾರ್ ನೀವೂ ತಾಳಿ ಪೋಣಿಸಿ ಎಂದು ಕಿಚಾಯಿಸಿದ್ದಾರೆ. ಈ ವೇಳೆ ಅಲ್ಲೇ ಕುಳಿತ ಶಾಸಕ ರೇಣುಕಾಚಾರ್ಯ ಕರಿಮಣಿ ತಾಳಿ ಪೋಣಿಸಿ ವರನಿಗೆ ಶುಭ ಹಾರೈಸಿ ತೆರಳಿದ್ದಾರೆ.