ನವದೆಹಲಿ: ಹೈದರಾಬಾದ್ ನಲ್ಲಿ ನಡೆದಿದ್ದ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಪ್ರಕರಣ ನಕಲಿ ಎಂದು ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ವರದಿ ಸಲ್ಲಿಸಿದೆ.
ಎನ್ ಕೌಂಟರ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ಇಂದು ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದ್ದು, 2019 ರಲ್ಲಿ ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಅಧಿಕಾರಿಗಳು ಹೇಳಿರುವಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಎನ್ ಕೌಂಟರ್ ಮಾಡಲಾಗಿದೆ ಎಂಬುದು ಸುಳ್ಳು ಎಂದು ಹೇಳಿದೆ.
ಆರೋಪಿಗಳನ್ನು ಕಾನೂನು ಬಾಹಿರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರಿಂದ ಹತ್ಯೆಗೀಡಾದ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತ ವಯಸ್ಕರು. ಈ ಬಗ್ಗೆ ಕೊಲೆಯ ಸಮಯದಲ್ಲಿ ಪೊಲೀಸರಿಗೆ ತಿಳಿದಿದೆ ಎಂದು ಆಯೋಗದ ವರದಿ ತಿಳಿಸಿದೆ.
ಇಂದು ನಡೆದ ವಿಚಾರಣೆ ವೇಳೆ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದ ವಿಸಿ ಸಜ್ಜನರ್ ಕೂಡ ಹಾಜರಾಗಿದ್ದರು. ಸಧ್ಯ ಪ್ರಕರಣವನ್ನು ಸುಪ್ರೀಂ ಕೋರ್ಟ್, ಹೈಕೋರ್ಟ್ ಗೆ ವರ್ಗಾವಣೆ ಮಾಡಿದ್ದು, ಎನ್ ಕೌಂಟರ್ ಕೇಸ್ ನಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ.