ಕೆನಡಾ: ರಾಷ್ಟ್ರಭಾಷೆ ಹಿಂದಿ ವಿಚಾರ, ಕನ್ನಡದ ಅಸ್ಮಿತೆ ವಿಷಯವಾಗಿ ಭಾರಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ದೂರದ ಕೆನಡಾದ ಪಾರ್ಲಿಮೆಂಟ್ ನಲ್ಲಿ ಕನ್ನಡದ ಡಿಂಡಿಮ ಮೊಳಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಹೇಳುತ್ತಿದ್ದರೂ ಆಗಾಗ ಹಿಂದಿ ಭಾಷೆಯ ಹೇರಿಕೆ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಈ ಎಲ್ಲದರ ನಡುವೆ ಈಗ ಕೆನಡಾ ಪಾರ್ಲಿಮೆಂಟ್ ನಲ್ಲಿ ‘ಕನ್ನಡದ ಕಹಳೆ’ ಮೊಳಗಿರುವುದು ಹೆಮ್ಮೆಯ ವಿಚಾರ.
ಕೆನಡಾ ಪಾರ್ಲಿಮೆಂಟ್ ನಲ್ಲಿ ಸಂಸದ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ. ಈ ಸುಂದರ ಭಾಷೆಗೆ ಸುದೀರ್ಘ ಇತಿಹಾಸವಿದೆ. ಕನ್ನಡ ಭಾಷೆಯನ್ನು 5 ಕೋಟಿ ಜನರು ಮಾತನಾಡುತ್ತಾರೆ ಎಂದು ಹೇಳಿದರು. ಈ ಮೂಲಕ ಇದೇ ಮೊದಲ ಬಾರಿಗೆ ವಿದೇಶಿ ಪಾರ್ಲಿಮೆಂಟ್ ನಲ್ಲಿ ಕನ್ನಡ ಮೊಳಗಿದಂತಾಗಿದೆ.
ಕುವೆಂಪು ರಚನೆಯ, ಡಾ.ರಾಜಕುಮಾರ್ ಹಾಡಿರುವ ಗೀತೆಯ ಸಾಲುಗಳಾದ ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು…….ಎಂಬ ಪದ್ಯದ ಮೂಲಕ ತಮ್ಮ ಭಾಷಣವನ್ನು ಕೆನಡಾ ಸಂಸತ್ ನಲ್ಲಿ ಮುಗಿಸಿದ್ದು ವಿಶೇಷವಾಗಿತ್ತು.
ಕರ್ನಾಟಕದ ತುಮಕೂರಿನ ಶಿರಾದ ದ್ವಾರಾಳು ಗ್ರಾಮದವರಾದ ಚಂದ್ರ ಆರ್ಯ, ಕೆನಡಾದ ಲಿಬರಲ್ ರಾಜಕಾರಣಿ. 2015ರ ಫೆಡರಲ್ ಚುನಾವಣೆಯಲ್ಲಿ ಕೆನಡಾ ಹೌಸ್ ಆಫ್ ಕಾಮನ್ಸ್ ನಲ್ಲಿ ನೇಪಿಯನ್ ಆಗಿ ಆಯ್ಕೆಯಾದರು. ಬಳಿಕ 2019ರಲ್ಲಿ ಫೆಡರಲ್ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಪ್ರಸ್ತುತ ಅಂತರಾಷ್ಟ್ರೀಯ ವ್ಯಾಪಾರದ ಸ್ಥಾಯಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.