ಅಪಘಾತ ಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಇರಿಸಿರುವುದನ್ನು ನೀವು ನೋಡಿರಬಹುದು. ಇಂತಹ ಪ್ರದೇಶ ಅಪಾಯ ಇಲ್ಲಿ ಕಾಲಿಡಬೇಡಿ ಅಂತೆಲ್ಲಾ ಬರೆಯಲಾಗಿರುತ್ತದೆ. ಆದರೆ, ಕೆಲವರು ಇವುಗಳನ್ನು ನಿರ್ಲಕ್ಷಿಸುತ್ತಾರೆ. ಇದೀಗ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ನೀವು ಶಾಕ್ ಆಗ್ತೀರಾ.
ಚೀನಾದಲ್ಲಿ ವ್ಯಕ್ತಿಯೊಬ್ಬ ಎಚ್ಚರಿಕೆ ಸೂಚನೆಯನ್ನು ನಿರ್ಲಕ್ಷಿಸಿ ಅಪಾಯವನ್ನು ತಂದುಕೊಂಡಿದ್ದಾನೆ. ಜಲಪಾತವನ್ನು ದಾಟಲು ಪ್ರಯತ್ನಿಸಿದ ಯುವಕನೊಬ್ಬ ತನ್ನ ಕಾಲು ಜಾರಿದ್ದರಿಂದ ಬಂಡೆಗಳ ನಡುವೆ ಜಲಪಾತದ ಕೆಳಗೆ ಬಂದು ಬಿದ್ದಿದ್ದಾನೆ.
ಈ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಯುವಕ ಜಲಪಾತದ ಮೇಲ್ಭಾಗದಲ್ಲಿ ಜಾರು ಬಂಡೆಗಳ ಮೇಲೆ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಕಾಲು ಜಾರಿ ಆತ ಕೆಳಗೆ ನೀರಿಗೆ ಬಿದ್ದಿದ್ದಾನೆ.
ಘಟನಾ ಸ್ಥಳದಲ್ಲಿದ್ದ ಆತನ ಸ್ನೇಹಿತರು, ಕೂಡಲೇ ಆತ ಬಿದ್ದಲ್ಲಿಗೆ ಧಾವಿಸಿದ್ದಾರೆ. ಈ ಘಟನೆಯು ಪೂರ್ವ ಚೀನಾದ ಆಂಕಿಂಗ್ ನಗರದಲ್ಲಿ ನಡೆದಿದೆ. ಸುಸಾಂಗ್ ಕೌಂಟಿಯ ಜಿಯುಜಿಂಗೌ ಸ್ಪಾಟ್‌ನಲ್ಲಿರುವ ಜಲಪಾತದಲ್ಲಿ ಯುವಕ ಎಚ್ಚರಿಕೆ ನಿರ್ಲಕ್ಷಿಸಿ ಅಪಾಯ ತಂದುಕೊಂಡಿದ್ದಾನೆ.
ಜನರು ಜಲಪಾತದ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಸಹ ಇರಿಸಲಾಗಿದೆ. ಆದರೆ ಈ ವ್ಯಕ್ತಿ ಎಚ್ಚರಿಕೆಯನ್ನು ನಿರ್ಲಕ್ಷಿಸಿದಲ್ಲದೆ ಸಾಹಸ ಮಾಡಲು ಮುಂದಾಗಿದ್ದಾನೆ. ಅದೃಷ್ಟವಶಾತ್, ಯುವಕನಿಗೆ ತೀವ್ರ ಗಾಯಗಳಾಗಿಲ್ಲ. ಆತನ ದೇಹದ ಮೇಲೆ ಕೆಲವು ಗೀರುಗಳು ಉಂಟಾಗಿವೆ. ಸದ್ಯ, ವಿಡಿಯೋ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಹಲವಾರು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದಕ್ಕೆ ಆತನಿಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.