ನವದೆಹಲಿ: ಎಎಪಿ ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯಾದ ಮುಖಮಂತ್ರಿ ಘರ್ ಘರ್ ಪಡಿತರ ಯೋಜನೆಯನ್ನು ದೆಹಲಿ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಈ ಯೋಜನೆಯನ್ನು ಪ್ರಶ್ನಿಸಿ ಪಡಿತರ ವಿತರಕರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಹೈಕೋರ್ಟ್ ಪುರಸ್ಕರಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಪೀಠವು ದೆಹಲಿ ಸರ್ಕಾರವು ಮತ್ತೊಂದು ಮನೆ ಬಾಗಿಲಿಗೆ ವಿತರಣಾ ಯೋಜನೆಯನ್ನು ತರಲು ಮುಕ್ತವಾಗಿದೆ. ಆದರೆ, ಈ ಮನೆ ಬಾಗಿಲಿಗೆ ಯೋಜನೆಗೆ ಕೇಂದ್ರವು ಒದಗಿಸಿದ ಧಾನ್ಯಗಳನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಅರ್ಜಿದಾರರಾದ ದೆಹಲಿ ಸರ್ಕಾರಿ ಪಡಿತರ ವಿತರಕರ ಸಂಘ ಮತ್ತು ದೆಹಲಿ ಪಡಿತರ ವಿತರಕರ ಒಕ್ಕೂಟದ ಅರ್ಜಿಗಳ ಕುರಿತು ವ್ಯಾಪಕ ವಿಚಾರಣೆ ನಡೆಸಿದ ನಂತರ ಹೈಕೋರ್ಟ್ ಜನವರಿ 10 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ನೀಡಿದೆ.