ಕಿರುತೆರೆ ನಟಿ ಚೇತನಾ ರಾಜ್ ಸಾವಿಗೆ ಕಾರಣವಾಗಿರುವ ಬೆಂಗಳೂರಿನ ರಾಜಾಜಿನಗರದ ಡಾ. ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್, ಪ್ಲಾಸ್ಟಿಕ್ ಸರ್ಜರಿ ನಡೆಸಲು ಪರವಾನಗಿಯನ್ನೇ ಹೊಂದಿರಲಿಲ್ಲ ಎಂದು ಆರೋಗ್ಯ ಇಲಾಖೆ ನಡೆಸಿರುವ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಕಾಸ್ಮೆಟಿಕ್ ಸೆಂಟರ್ ಕೇವಲ ಪಾಲಿಕ್ಲಿನಿಕ್ ಗೆ ಪರವಾನಗಿ ಪಡೆದಿದ್ದು, ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಸರ್ಜರಿ ನಡೆಸಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಮಿತಿಯು ಕಾಸ್ಮೆಟಿಕ್ ಸೆಂಟರ್ ವಿರುದ್ಧ ಕಾನೂನು ಕ್ರಮ ಜರುಗಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಕೆಪಿಎಂಇ ಉಪನಿರ್ದೇಶಕ ಡಾ. ವಿವೇಕ್ ದೊರೈ ನೇತೃತ್ವದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡಗಳು ಕಾಸ್ಮೆಟಿಕ್ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ್ದವಾದರೂ ಕೇಂದ್ರವನ್ನು ಮಂಗಳವಾರವೇ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಘಟನೆಗೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಕೇಂದ್ರಕ್ಕೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ವಿವೇಕ್ ದೊರೈ ತಿಳಿಸಿದ್ದಾರೆ.
ಈ ಕೇಂದ್ರದಿಂದ ಉತ್ತರ ಬರದಿದ್ದರೂ ಜಿಲ್ಲಾಧಿಕಾರಿ ನೇತೃತ್ವದಲ್ಲಿರುವ ಸಮಿತಿಯು ಕೇಂದ್ರದ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲಿದೆ ಎಂದು ಅವರು ಹೇಳಿದ್ದಾರೆ.