ಮಾರ್ಚ್ 28 ರಿಂದ ಏಪ್ರಿಲ್ 11 ರ ವರೆಗೆ ನಡೆದಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಧ್ಯಮ ಪ್ರತಿನಿಧಿಗಳಿಗೆ ಇದರ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವರು, 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 8,07,206 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಒಟ್ಟಾರೆ ಶೇ.85.63 ಮಕ್ಕಳು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇ.90.29 ಉತ್ತೀರ್ಣರಾಗಿದ್ದಾರೆ. ಇನ್ನು ಶೇ.81.30 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಗ್ರೇಡ್ ವೈಸ್ ಫಲಿತಾಂಶ:
A+ (90-100%): 1,18,875
A (80-89%): 1,82,600
B+ (70-79%): 1,73,528
B (60-69%): 1,43,900
C+ (50-59%): 87,801
C (35-49%): 14,627
ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಾವುದೇ ಅಡೆತಡೆಯಿಲ್ಲದೇ ನಡೆದಿದ್ದು, 2022 ರ ಕರ್ನಾಟಕ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮಾರ್ಚ್ 28, 2022 ರಿಂದ ಏಪ್ರಿಲ್ 11, 2022 ರವರೆಗೆ ರಾಜ್ಯದ 3440 ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆದಿತ್ತು. ಫಲಿತಾಂಶ karresults.nic.in ಈ ವೆಬ್ಸೈಟ್ ನಲ್ಲಿಯೂ ಲಭ್ಯವಿದ್ದು, ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ.
ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನಿಮ್ಹಾನ್ಸ್ ಸಹಾಯದೊಂದಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಸಹಾಯವಾಣಿ ಆರಂಭಿಸಿದೆ. ಒತ್ತಡದಲ್ಲಿರುವ ವಿದ್ಯಾರ್ಥಿಗಳು 080-46110007 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.
ಮರು ಮೌಲ್ಯಮಾಪನ: ಫಲಿತಾಂಶದ ಬಳಿಕ ಮರುಮೌಲ್ಯಮಾಪನ ಅಥವಾ ಅಂಕಗಳ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೂರು ದಿನಗಳಲ್ಲೇ ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೆಬ್ ಸೈಟ್ ನಲ್ಲಿ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಉತ್ತರ ಪತ್ರಿಕೆ ಲಭ್ಯವಾಗುವಂತೆ ಅನುಕೂಲ ಕಲ್ಪಿಸಲಾಗಿದೆ.
ಈ ಮೊದಲು ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮೌಲ್ಯಮಾಪನ ಅಥವಾ ಅಂಕಗಳ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಇಮೇಲ್ ವಿಳಾಸ ನೀಡುವ ಸಂದರ್ಭದಲ್ಲಿ ಒಂದು ಅಕ್ಷರ ವ್ಯತ್ಯಾಸವಾದರೂ ಸಹ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ತಲುಪುತ್ತಿರಲಿಲ್ಲ. ಇದರಿಂದ ವಿಳಂಬವಾಗುತ್ತಿತ್ತು.
ಆದರೆ ಇದೀಗ ಮಂಡಳಿಯ ವೆಬ್ಸೈಟ್ನಲ್ಲಿ ಉತ್ತರ ಪತ್ರಿಕೆಯ ಪ್ರತಿಯನ್ನು ಅಪ್ಲೋಡ್ ಮಾಡಲಿದ್ದು, ವಿದ್ಯಾರ್ಥಿಗಳು ನೀಡುವ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ವೇಳೆ ಲಾಗಿನ್ ಕ್ರಿಯೇಟ್ ಮಾಡಬೇಕಾಗುತ್ತದೆ. ಆ ಬಳಿಕ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಒಟಿಪಿಯನ್ನು ನಮೂದಿಸಿದರೆ ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ವಿದ್ಯಾರ್ಥಿಗಳು ನೋಡಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಬಾಲಕಿಯರು- ಶೇ. 90.29,ಬಾಲಕರು- ಶೇ. 81.30. 8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.
40,061ಮಕ್ಕಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸಾಗಿದ್ದಾರೆ. ಒಂದು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ಪಡೆದವರು 35,931 ವಿದ್ಯಾರ್ಥಿಗಳಿದ್ದಾರೆ. ವಿಜಯಪುರ ಮೊದಲ ಸ್ಥಾನ, 2ನೇ ಸ್ಥಾನ ತುಮಕೂರು ಜಿಲ್ಲೆ.
ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಅಮಿತ್ ಮಾದವ್, ತುಮಕೂರು ಜಿಲ್ಲೆಯ ಬಿ.ಆರ್.ಭೂಮಿಕಾ, ಹಾವೇರಿ ಜಿಲ್ಲೆಯ ಪ್ರವೀಣ್ ನೀರಲಗಿ, ಬೆಳಗಾವಿಯ ಸಹನಾ ರಾಯರ್, ವಿಜಯಪುರ ಜಿಲ್ಲೆಯ ಐಶ್ವರ್ಯ ಕನಸೆ, ಉಡುಪಿಯ ಗಾಯತ್ರಿ, ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯ ಅನಘಾ ಎಂ.ಮೂರ್ತಿ, ಚಿಕ್ಕಮಗಳೂರಿನ ಎಸ್.ಎಸ್.ಆಕೃತಿ, ಹಾಸನ ಜಿಲ್ಲೆಯ ಅರ್ಜುನ್ ನಾಯ್ಕ್, ಬಳ್ಳಾರಿಯ ಕೂಡ್ಲಗಿಯ ಕವನಾ, ಶಿರಸಿ ಮಾರಿಕಾಂಬ ಶಾಲೆಯ ಚಿರಾಗ್ ಮಹೇಶ್ ನಾಯ್ಕ್, ಮೈಸೂರಿನ ಆದರ್ಶ ವಿದ್ಯಾಲಯದ ಎಂ.ಜಿ.ಏಕತಾ, ಕುಂದಾಪುರದ ಕಲವರ ಪ್ರೌಢಶಾಲೆಯ ನಿಶಾ, ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಹೆಚ್.ಎನ್.ಪ್ರಗತಿ, ಮಂಡ್ಯದ ಶ್ರೀಮಹಾಲಕ್ಷ್ಮಿ ಹೈಸ್ಕೂಲಿನ ಅಪೂರ್ವ, ಶಿವಮೊಗ್ಗ ಅಶೋಕ ನಗರದ ಅನನ್ಯಾ ಇಂಗ್ಲೀಷ್ ಹೈಸ್ಕೂಲ್ ನ ಹೆಚ್.ಎನ್.ಅನನ್ಯಾ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹನುಮಂತಪುರ ಗೇಟ್ ನ ಬಿಜಿ ಎಸ್ ಪಬ್ಲಿಕ್ ಶಾಲೆಯ ಹರ್ಷಿತಾ, ಪುತ್ತೂರಿನ ವಿವೇಕಾನಂದ ಇಂಗ್ಲೀಷ್ ಹೈಸ್ಕೂಲ್ ನ ಆತ್ಮೀಯ ಕಶ್ಯಪ್, ಮೈಸೂರು ಜಿಲ್ಲೆ ನಂಜನಗೂಡಿನ ಕಾರ್ಮೆಲ್ ಸ್ಕೂಲ್ ನ ದೇವಿಕಾ, ಮೈಸೂರಿನ ಟಿ.ನರಸಿಪುರದ ಬನ್ನೂರಿನ ಶ್ರೀ ಆದಿಚುಂಚನಗಿರಿ ಇಂಗ್ಲೀಷ್ ಹೈಸ್ಕೂಲಿನ ದಿಶಾ, ಬೆಂಗಳೂರಿನ ಕೊಟ್ಟಿಗೆಪಾಳ್ಯದ ಎಸ್.ವಿ.ಪಬ್ಲಿಕ್ ಶಾಲೆಯ ಗಾನಾ ಸೇರಿದಂತೆ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿದ್ದಾರೆ.