ನವದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹಗಳು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಸೀದಿ ಸರ್ವೆಗೆ ಆದೇಶ ನೀಡಿದ್ದ ವಾರಣಾಸಿ ಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಜ್ಞಾನವಾಪಿ ಮಸೀದಿ ವಿಡಿಯೋ ಸರ್ವೆ ನಡೆಸುವಂತೆ ವಾರಣಾಸಿ ಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಮೂರು ದಿನಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಅಧಿಕಾರಿಗಳು ಮೇ 14-16ರವರೆಗೆ ನಡೆದ ಸರ್ವೆ ವರದಿಯನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಸರ್ವೆ ವರದಿಯಲ್ಲಿ ಮಸೀದಿಯಲ್ಲಿ ದೇವರ ವಿಗ್ರಹವಿರುವ ಕುರುಹುಗಳು ಪತ್ತೆಯಾಗಿವೆ ಎಂದು ತಿಳಿದಿಬಂದಿದೆ.
ಈ ನಡುವೆ ಮಸೀದಿ ಪರ ವಕೀಲ ಹಿಜೇಫಾ ಅಹ್ಮದಿ ವಾರಣಾಸಿ ಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾರಣಾಸಿ ಕೋರ್ಟ್ ವಿಚಾರಣೆಗೆ ತಡೆ ನೀಡಿದೆ.
ಶುಕ್ರವಾರ ಮಧ್ಯಾಹ್ನದವರೆಗೂ ವಿಚಾರಣೆ ನಡೆಸದಂತೆ ತಡೆ ನೀಡಿದೆ. ಅಲ್ಲದೇ ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.