ತಮಾಷೆಯ ಪ್ರಸಂಗಗಳ ವೀಡಿಯೋ, ಚಿತ್ರಗಳನ್ನು ಪೊಲೀಸರೂ ಹಂಚಿಕೊಳ್ಳುವುದನ್ನು ನೀವು ನೋಡಿಕಬಹುದು. ನೀವು ನಗದಿರಲು ಸಾಧ್ಯವೇ ಇಲ್ಲದ ಚಿತ್ರವೊಂದು ಥೈಲ್ಯಾಂಡ್ನ ಬ್ಯಾಂಕಾಕ್ ನಿಂದ ಪೋಸ್ಟ್ ಆಗಿದೆ. ಲುಂಪಿನಿ ಪೊಲೀಸರು ಹಂಚಿಕೊಂಡಿದ್ದಾರೆ.
ಮಳೆಯಲ್ಲಿ ನೆನೆದು ನಡುಗುತ್ತಿದ್ದ ನಾಯಿಮರಿಯೊಂದರ ಸಮೀಪ ಒಬ್ಬ ಪೊಲೀಸ್ ಅಧಿಕಾರಿ ಬಂದಾಗ, ಅದು ಹೆದರಿ ಚೀರಲಾರಂಭಿಸಿತು.
ನಿಮಿತ್ ನುಫೊಂತೊಂಗ್ ಎಂಬ ಹೆಸರಿನ ಆ ಪೊಲೀಸ್ ಅಧಿಕಾರಿ ಅದನ್ನು ಎತ್ತಿಕೊಂಡು ಪೊಲೀಸ್ ಠಾಣೆಗೆ ಕರೆತಂದ. ಅಲ್ಲಿ ಅದನ್ನು ಒರೆಸಿ, ಬೆಚ್ಚಗಿನ ವಾತಾವರಣವನ್ನು ಒದಗಿಸಿ, ತಿನ್ನಲು ಆಹಾರವನ್ನೂ ಕೊಟ್ಟ. ಬಳಿಕ ಅದರ ಫೋಟೋಗಳನ್ನು ತೆಗೆದುಕೊಳ್ಳಲು ಆರಂಭಿಸಿದ. ಅದೂ ಖುಷಿಯಿಂದಲೇ ಪೋಸು ಕೊಟ್ಟಿತು. ಬಳಿಕ ಫಲಕದಲ್ಲಿ ಅದರ ಫೋಟೋ ಹಾಕಿ ವಿವರಗಳನ್ನು ಪ್ರಕಟಿಸಿದ. ಅವು ಹೀಗಿದ್ದವು: ಹೆಸರು- ಗೋಲ್ಡನ್ ರಿಟ್ರೀವರ್, ಅಪರಾಧ- ತಪ್ಪಿಸಿಕೊಂಡ ನಾಯಿ.
ಈ ಮುದ್ದಾದ ನಾಯಿ ಮರಿಯನ್ನು ನೋಡಿ ನೆಟ್ಟಿಗರೂ ಕರಗಿದ್ದಾರೆ. ಅದರ ‘ಅಪರಾಧ’ವನ್ನು ಮನ್ನಿಸುವಂತೆ ಮನವಿ ಮಾಡಿದ್ದಾರೆ. ಚಿತ್ರವನ್ನು ನೋಡಿ ನಾಯಿಯ ಮಾಲೀಕ ಬಂದು, ಅದನ್ನು ಕರೆದೊಯ್ದಿದ್ದಾನೆ. ಆ ಚಿತ್ರವನ್ನೂ ಪೊಲೀಸರು ಹಂಚಿಕೊಂಡಿದ್ದಾರೆ. ಪೊಲೀಸರ ಮಾನವೀಯತೆ ಹಾಗೂ ತಮಾಷೆಯು ಈಗ ಶ್ಲಾಘನೆಗೆ ಪಾತ್ರವಾಗಿದೆ.