ಬೆಂಗಳೂರು: ಹಾವೇರಿಯಲ್ಲಿ ಸೆಪ್ಟೆಂಬರ್ 23 ರಿಂದ ಮೂರು ದಿನಗಳ ಕಾಲ ನಿಗದಿಯಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮತ್ತೆ ಮುಂದೂಡಲಾಗುವುದು.
ಸಾಹಿತ್ಯ ಸಮ್ಮೇಳನ ನಿಗದಿಯಾಗಿರುವ ದಿನಗಳಂದು ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ಮಹಾಲಯ ಅಮಾವಾಸ್ಯೆಯ ಕಾರಣ ಸಾಹಿತ್ಯ ಸಮ್ಮೇಳನ ಮುಂದೂಡುವ ಚಿಂತನೆ ನಡೆದಿದೆ.
ಸಿರಿಗೆರೆ ಶ್ರೀಗಳು ಸಮ್ಮೇಳನ ಮುಂದೂಡುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಮಂದಿ ಭಾಗವಹಿಸಲಿದ್ದು, ಇಂತಹ ಸಂದರ್ಭದಲ್ಲಿ ಸಮ್ಮೇಳನ ನಡೆಸಿದರೆ ಭಕ್ತರಿಗೆ ತೊಂದರೆಯಾಗುತ್ತದೆ. ಕೊರೋನಾ ಕಾರಣದಿಂದಾಗಿ ಈ ಹಿಂದಿನ ವರ್ಷಗಳಲ್ಲಿ ಸರಳವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿದ್ದು, ಈ ವರ್ಷ ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರಣ ಸಮ್ಮೇಳನವನ್ನು ಮುಂದೂಡುವಂತೆ ಮುಖ್ಯಮಂತ್ರಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಿರಿಗೆರೆ ಶ್ರೀಗಳು ಪತ್ರ ಬರೆದಿದ್ದಾರೆ.
ಮಹಾಲಯ ಅಮಾವಾಸ್ಯೆ, ಪಿತೃಪಕ್ಷದಂದು ಸಾಹಿತ್ಯ ಸಮ್ಮೇಳನ ನಡೆಸುವುದು ಬೇಡ ಎಂದು ವಕೀಲರೊಬ್ಬರು ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 25 ರಂದು ಮಹಾಲಯ ಅಮಾವಾಸ್ಯೆ ಇರುವುದರಿಂದ ಅಂದು ಅನೇಕರು ಪೂರ್ವಿಕರನ್ನು ಪೂಜಿಸುವ ದಿನವಾಗಿರುವುದರಿಂದ ಸಮ್ಮೇಳನ ಮುಂದೂಡುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಹೀಗೆ ಅನೇಕ ಕಾರಣಗಳಿಂದ ನವೆಂಬರ್ 11ರಿಂದ 13ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಚಿಂತನೆ ನಡೆದಿದ್ದು, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮ ದಿನಾಂಕ ನಿಗದಿಪಡಿಸಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆನ್ನಲಾಗಿದೆ.