ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಬಾಲಕನೊಬ್ಬ ಮಾಡಿದ ಸುಳ್ಳು ಆರೋಪವನ್ನು ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಮುಂಬೈನ ವಿಶೇಷ ನ್ಯಾಯಾಲಯ ರಿಲೀಫ್ ನೀಡಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಡಿಯಲ್ಲಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಆ ವ್ಯಕ್ತಿಯನ್ನು ಆರೋಪದಿಂದ ಖುಲಾಸೆ ಮಾಡಿ ಆದೇಶ ಹೊರಡಿಸಿದೆ.
ಬಾಲಕ ಸಿಗರೇಟ್ ಸೇದುತ್ತಿದ್ದ ವೇಳೆ ತನ್ನ ತಾಯಿಗೆ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ತಾಯಿ ಆತನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇದರಿಂದ ಬಚಾವಾಗಲು ಬಾಲಕ ಸ್ಥಳದಲ್ಲಿಯೇ ಇದ್ದ 18 ವರ್ಷದ ಯುವಕ ತನಗೆ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾನೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ತಾಯಿ ದೂರು ನೀಡಿದ್ದಾಳೆ. ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು, ಬಾಲಕ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಮತ್ತು ಆರೋಪವನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯವೂ ಇಲ್ಲ ಎಂದು ಅಭಿಪ್ರಾಯಪಟ್ಟು ಯುವಕನನ್ನು ಆರೋಪಮುಕ್ತಗೊಳಿಸಿದೆ.
ಬಾಲಕನು ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ತಪ್ಪಿಸಿಕೊಳ್ಳಲು ಬಾಲಕ ಮಾಡಿರುವ ಆರೋಪ ಅನುಮಾನದಿಂದ ಕೂಡಿದೆ. ಆದ್ದರಿಂದ ಯುವಕನನ್ನು ಆರೋಪ ಮುಕ್ತಗೊಳಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿದೆ.