
ಚಿಕ್ಕಮಗಳೂರು: ನಗರಸಭೆ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬೀದಿಬದಿ ವ್ಯಾಪಾರಿಯೊಬ್ಬ ತನ್ನ ಗಾಡಿಗೆ ತಾನೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ ಬಳಿ ನಗರಸಭೆ ಕಚೇರಿ ಬಳಿ ಈ ಘಟನೆ ನಡೆದಿದೆ. ತಳ್ಳುಗಾಡಿಯಿಟ್ಟುಕೊಂಡು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಗೆ ನಗರಸಭೆ ಅಧಿಕಾರಿಗಳು ಹಣ ನೀಡುವಂತೆ ಕೇಳಿದ್ದಾರೆ. ಹಣ ಕೊಡದಿದ್ದರೆ ವ್ಯಾಪಾರಕ್ಕೆ ಬಿಡುವುದಿಲ್ಲ ಗಾಡಿ ಎತ್ತಿಕೊಂಡು ಹೋಗುವುದಾಗಿ ಬೆದರಿಸಿದ್ದಾರೆ.
BIG NEWS: ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ
ನಗರಸಭೆ ಅಧಿಕಾರಿಗಳ ಕಿರುಕುಳಕ್ಕೆ ನೊಂದ ವ್ಯಾಪಾರಿ ನನ್ನ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಾ. ಹೀಗಾದರೆ ಜೀವನ ಸಾಗಿಸುವುದಾದರೂ ಹೇಗೆ? ನೀವು ನನ್ನ ಗಾಡಿ ತೆಗೆದುಕೊಂಡು ಹೋಗುವುದು ಬೇಡ. ನಾನೇ ಅದನ್ನು ಬೆಂಕಿ ಹಚ್ಚುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ. ಆದರೂ ಕರುಣೆಯಿಲ್ಲದ ಅಧಿಕಾರಿಗಳು ವ್ಯಾಪಾರಕ್ಕೆ ಅವಕಾಶ ಕೊಟ್ಟಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ವ್ಯಕ್ತಿ ತನ್ನ ಗಾಡಿಗೆ ತಾನೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ತಾನು ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸಲು ಸ್ಥಳೀಯ ಮುಖಂಡರು, ಶಾಸಕರಿಂದಲೂ ಪರವಾನಗಿ ಪಡೆದುಕೊಂಡಿದ್ದೇನೆ. ಆದರೂ ನಗರಸಭೆ ಅಧಿಕಾರಿಗಳು ವ್ಯಾಪಾರಕ್ಕೆ ಬಿಡುತ್ತಿಲ್ಲ. ಪ್ರತಿದಿನ 500-1000 ರೂಪಾಯಿ ಕೇಳುತ್ತಾರೆ. ನಾವು ಕಷ್ಟಪಟ್ಟು 100-200 ರೂಪಾಯಿ ಸಂಪಾದಿಸಿ ಬದುಕುತ್ತಿದ್ದೇವೆ. ಅದರಲ್ಲೂ ಅಧಿಕಾರಿಗಳು ದಿನವೂ ಐನೂರು, ಸಾವಿರ ಹಣ ಕೆಳಿದರೆ ಎಲ್ಲಿಂದ ತರಲಿ. ಇಲ್ಲಿನ ವ್ಯಾಪಾರಸ್ಥರಿಗೆ ಅಧಿಕಾರಿಗಳ ಕಿರುಕುಳ ಹೆಚ್ಚುತ್ತಿದೆ. ಇದರಿಂದ ಮನನೊಂದು ನಾನೇ ಗಾಡಿಗೆ ಬೆಂಕಿ ಹಚ್ಚಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.