ನವದೆಹಲಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿದೆ. ಅಯೋಧ್ಯೆಯ ರಾಮ ಜನ್ಮಭೂಮಿ -ಬಾಬ್ರಿ ಮಸೀದಿ ನಂತರ ಮತ್ತೆ ಮಂದಿರ -ಮಸೀದಿ ವಿಚಾರ ಭಾರಿ ಸಂಚಲನ ಮೂಡಿಸಿದೆ.
ಸ್ಥಳೀಯ ಕೋರ್ಟ್ ನಿರ್ದೇಶನದ ಮೇರೆಗೆ ಮೂರು ದಿನಗಳ ಕಾಲ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಸಮೀಕ್ಷೆ ನಡೆಸಲಾಗಿದ್ದು, ಕೊಳದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಸಮೀಕ್ಷೆಗೆ ಒತ್ತಾಯಿಸಿದ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಮುಸ್ಲಿಮರು ಧಾರ್ಮಿಕ ಆಚರಣೆಗೆ ಮೊದಲು ಶುದ್ಧೀಕರಣಕ್ಕಾಗಿ ಬಳಸುವ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ವಾರಣಾಶಿಯ ಕಾಶಿ ವಿಶ್ವನಾಥ ದೇವಾಲಯದ ಸಮೀಪ ಜ್ಞಾನವ್ಯಾಪಿ ಮಸೀದಿ ಇದೆ. ಇದು ಮೊದಲು ಹಿಂದೂ ದೇವಾಲಯವಾಗಿದ್ದು, ಔರಂಗಜೇಬ್ ಈ ಸ್ಥಳದಲ್ಲಿ ಮಸೀದಿ ನಿರ್ಮಿಸಿದ. ಗೋಡೆಗಳ ಮೇಲೆ ಹಿಂದೂ ದೇವತೆಗಳ ಕೆತ್ತನೆಗಳಿವೆ. ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಐವರು ಮಹಿಳೆಯರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಮಸೀದಿ ಆಡಳಿತ ಮಂಡಳಿ ನಿರಾಕರಿಸಿತ್ತು. ಇದು ದೇವಾಲಯವಲ್ಲವೆಂದು ಆಡಳಿತ ಮಂಡಳಿ ಹೇಳಿದ್ದು, ಹೀಗಾಗಿ ನ್ಯಾಯಾಲಯ ಬಿಗಿಭದ್ರತೆಯ ನಡುವೆ ವಿಡಿಯೋ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು.
ಮಸೀದಿ ಸಮೀಕ್ಷೆಗೆ ನಿರ್ದೇಶನ ನೀಡಿದ ಸ್ಥಳೀಯ ಕೋರ್ಟ್ ಆದೇಶ ಪ್ರಶ್ನಿಸಿ ಜ್ಞಾನವ್ಯಾಪಿ ಮಸೀದಿ ಸಮಿತಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಇಂದು ಅರ್ಜಿಯ ವಿಚಾರಣೆ ನಡೆಯಲಿದೆ.