10ನೇ ತರಗತಿ ಶಾಲಾ ಪಠ್ಯದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್ ಅವರ ಭಾಷಣವನ್ನು ಸೇರ್ಪಡೆ ಮಾಡಲಾಗಿದ್ದು, ಪಿ. ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ಸಾರಾ ಅಬೂಬಕರ ಅವರ ‘ಯುದ್ಧ’, ಮೂರ್ತಿರಾಯರ ‘ವ್ಯಾಘ್ರಗೀತೆ’ ಸೇರಿದಂತೆ ಕೆಲವು ಪಾಠಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ.
ಹೆಡ್ಗೆವಾರ್ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು ?, ಶತಾವಧಾನಿ ಡಾ. ಆರ್. ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು, ಉದಾತ್ತ ಚಿಂತನೆಗಳು’ ಸೇರಿದಂತೆ ಕೆಲವು ಬರಹಗಳನ್ನು ಭಾಗಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇದು ಈಗ ಪರ-ವಿರೋಧದ ಅಭಿಪ್ರಾಯಕ್ಕೆ ಕಾರಣವಾಗಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಹೆಡ್ಗೆವಾರ್ ಅವರ ಭಾಷಣವನ್ನು ಸೇರ್ಪಡೆ ಮಾಡಿರುವುದಕ್ಕೆ ಸಮರ್ಥನೆ ಮಾಡಿಕೊಂಡಿದ್ದು, ಆರ್.ಎಸ್.ಎಸ್. ಅಥವಾ ಹೆಡ್ಗೆವಾರ್ ಅವರ ಕುರಿತ ವಿಷಯಗಳನ್ನು ಸೇರ್ಪಡೆ ಮಾಡಲಾಗಿಲ್ಲ. ದೇಶದ ಕುರಿತು ಅವರು ಮಾಡಿರುವ ಭಾಷಣವನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರ, ಹೆಡ್ಗೆವಾರ್ ಭಾಷಣ ಸೇರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಪಠ್ಯವು ವೈಜ್ಞಾನಿಕ, ಧರ್ಮ ನಿರಪೇಕ್ಷಿತವಾಗಿರಬೇಕು. ಆದರೆ ಈ ಸರ್ಕಾರ ಪಠ್ಯವನ್ನು ತಿರುಚಿ ಪ್ರಕಟಿಸುವ ಸಾಹಸಕ್ಕೆ ಕೈಹಾಕಿದೆ ಎಂದಿದ್ದಾರೆ.