ಕೆನಡಾದ ಕ್ವಿಬೆಕ್ನ ಟ್ಯಾನಿಯೋಸ್ ಟೋನಿ ಹೆಲೋ ಎಂಬ 75 ವರ್ಷದ ವೃದ್ಧನಿಗೆ ತನಗೆ ತಾನು ಸವಾಲೆಸೆದುಕೊಳ್ಳಲು ವಯಸ್ಸು ಅಡ್ಡ ಬಂದಂತೆ ಕಾಣುತ್ತಿಲ್ಲ. ಟೋನಿ ಶೀರ್ಷಾಸನ ಪ್ರದರ್ಶಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗಿನ್ನೆಸ್ ದಾಖಲೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಮನುಷ್ಯ ತಾನು ಏನನ್ನಾದರೂ ಸಾಧಿಸಬೇಕೆಂದುಕೊಂಡರೆ ಆತನಿಗೆ ವಯಸ್ಸಿನ ಅಡೆತಡೆ ಇರೋದಿಲ್ಲ ಎಂಬ ಮಾತಿಗೆ ಟೋನಿ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದಾರೆ. ಕಳೆದ ವರ್ಷ ಅಕ್ಟೋಬರ್ 16ರಂದು ತಮ್ಮ 75 ವರ್ಷ 33 ದಿನಗಳ ವಯಸ್ಸಿನಲ್ಲಿ ಈ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.
ಅಂದ ಹಾಗೆ ಶೀರ್ಷಾಸನ ಮಾಡುವುದು ಟೋನಿಗೆ ಕಷ್ಟದ ಕೆಲಸವೇ ಅಲ್ಲವಂತೆ. 55 ವರ್ಷ ವಯಸ್ಸಿನಲ್ಲಿ ವರ್ಕೌಟ್ ಮಾಡಲು ಆರಂಭಿಸಿದರು. ಓಟ, ಪುಷಪ್ಸ್ ಸೇರಿದಂತೆ ವಿವಿಧ ವ್ಯಾಯಾಮಗಳನ್ನು ಮಾಡುವ ಮೂಲಕ ಟೋನಿ ಇಳಿವಯಸ್ಸಿನಲ್ಲಿಯೂ ಆರೋಗ್ಯ ಕಾಪಾಡಿಕೊಂಡು ಬಂದಿದ್ದಾರೆ.
ಪ್ರತಿ ದಿನ ಬೆಳಗ್ಗೆ ಟೋನಿ 15 ರಿಂದ 20 ನಿಮಿಷಗಳ ಕಾಲ ಓಡುತ್ತಾರೆ. ಇದಾದ ಬಳಿಕ 20 ಪುಷಪ್ಸ್ ಹಾಗೂ ಶೀರ್ಷಾಸನವನ್ನು ಮಾಡುತ್ತಾರೆ.