ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೃಷ್ಣ ರಾಜ ಸಾಗರ (ಕೆ ಆರ್ ಎಸ್)ದಲ್ಲಿ 10 ವರ್ಷಗಳ ನಂತರ ಮೇ ತಿಂಗಳಲ್ಲಿ ಇದೇ ಮೊದಲ ಬಾರಿಗೆ 100 ಅಡಿಗೂ ಹೆಚ್ಚು ನೀರು ತುಂಬಿದೆ.
ಮಾರ್ಚ್ –ಏಪ್ರಿಲ್ ತಿಂಗಳಲ್ಲಿ ಕೊಡಗಿನಲ್ಲಿ ಮಳೆ ಬಿದ್ದಿದ್ದರಿಂದ ಕೆ ಆರ್ ಎಸ್ ಅಣೆಕಟ್ಟೆಗೆ ನಿರೀಕ್ಷೆಗಿಂತ ಹೆಚ್ಚು ನೀರು ಹರಿದುಬಂದಿದೆ. ಇದೇ ವೇಳೆ, ನೆರೆ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿ ಬಿಡುತ್ತಿದ್ದರೂ 100 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಂಗಳೂರಿನ ನಾಗರಿಕರು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುವುದು ತಪ್ಪಿದಂತಾಗಿದೆ.
2013 ರ ಮೇ ತಿಂಗಳಲ್ಲಿ ಅಣೆಕಟ್ಟೆಯ ನೀರಿನ ಮಟ್ಟ 64.12 ಅಡಿಗಳಷ್ಟಿತ್ತು. ಆ ವರ್ಷ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಮೈಸೂರಿನ ನಾಗರಿಕರಿಗೆ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗಿತ್ತು.
ಇನ್ನು 2017 ರ ಮೇ ತಿಂಗಳಲ್ಲಿ 70.03 ಅಡಿಗಳು ಮತ್ತು 2018 ರ ಮೇ ತಿಂಗಳಲ್ಲಿ 70.13 ಅಡಿಗಳಷ್ಟು ನೀರಿತ್ತು. ಇದೇ ವೇಳೆ, ಕಬಿನಿ ಅಣೆಕಟ್ಟೆಯಲ್ಲಿಯೂ ಈ ಬಾರಿ ಉತ್ತಮ ನೀರು ಸಂಗ್ರಹವಾಗಿದೆ. ಇದರಿಂದಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ನಿವಾಸಿಗಳಿಗೆ ಯಾವುದೇ ಸಮಸ್ಯೆ ಇಲ್ಲದೇ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿದೆ.