ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಕಾರ್ಯಕ್ರಮವೊಂದರಲ್ಲಿ ತಮ್ಮ ಮುಂದೆಯೇ ಸಂಸದರಿಗೆ ಮಾತ್ರ ಜೈಕಾರ ಹಾಕಿ ತಮ್ಮನ್ನು ಮರೆತಿದ್ದಕ್ಕೆ ಶಿವಲಿಂಗೇಗೌಡ ಸಿಡಿಮಿಡಿಗೊಂಡಿದ್ದಾರೆ.
ಇಂಥದೊಂದು ಘಟನೆ ಅರಸೀಕೆರೆ ತಾಲ್ಲೂಕಿನ ತಿರುಪತಿಹಳ್ಳಿಯಲ್ಲಿ ಶನಿವಾರ ನಡೆದ ಮುತ್ತುರಾಯ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಶಾಸಕ ಶಿವಲಿಂಗೇಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರೂ ಸಹ ಆಗಮಿಸಿದ್ದರು.
ಈ ವೇಳೆ ಕೆಲವರು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೈಕಾರ ಹಾಕಿದ್ದು, ಇದರಿಂದ ಅಸಮಾಧಾನಗೊಂಡ ಶಿವಲಿಂಗೇಗೌಡ ನನಗೂ ಒಂದು ಬಾರಿ ಜೈ ಅಂತ ಹೇಳಿದರೆ ನಿಮ್ಮ ಗಂಟು ಹೋಗಿ ಬಿಡುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ಪ್ರಜ್ವಲ್ ರೇವಣ್ಣ ಅವರಿಗೆ ಸಂಸದರೇ, ನಿಮ್ಮ ಪಿಎ ಒಬ್ಬ ಇದ್ದಾನೆ. ನೀವು ಎಲ್ಲಿಗೆ ಹೋದರೂ ಅವನು ಒಂದಷ್ಟು ಹುಡುಗರನ್ನು ಕಟ್ಟಿಕೊಂಡು ಜೈಕಾರ ಹಾಕಿಸುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡೆಗೆ ಜೈಕಾರ ಹಾಕುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ ಸಂಸದ ಪ್ರಜ್ವಲ್ ರೇವಣ್ಣ, ಶಿವಲಿಂಗಣ್ಣ ಅವರನ್ನು ಕಾರ್ಯಕ್ರಮಕ್ಕೆ ಬರಲು ನಾನೇ ಕರೆ ಮಾಡಿ ಹೇಳಿದ್ದೆ ಎಂದು ತಿಳಿಸಿದರು.