ಎರಡು ವರ್ಷಗಳ ಹಿಂದೆ ದೇಶದಲ್ಲಿ ವಕ್ಕರಿಸಿದ ಕೊರೊನಾ ಮಹಾಮಾರಿ ಬಹುತೇಕ ಎಲ್ಲ ಕ್ಷೇತ್ರಗಳನ್ನೂ ಹಾಳು ಮಾಡಿದ್ದು, ಅದರಲ್ಲೂ ಶಿಕ್ಷಣ ಕ್ಷೇತ್ರ ತೀವ್ರ ಪರಿಣಾಮವನ್ನು ಎದುರಿಸಿತ್ತು. ಆ ಸಂದರ್ಭದಲ್ಲಿ ಶಾಲಾ – ಕಾಲೇಜುಗಳು ಬಂದ್ ಆಗಿದ್ದಲ್ಲದೇ ಕೆಲವು ತರಗತಿಗಳ ಪರೀಕ್ಷೆಗಳನ್ನು ಸಹ ನಡೆಸದೆ ಪಾಸ್ ಮಾಡಲಾಗಿತ್ತು.
ಇದೀಗ ಕೊರೊನಾ ಸೋಂಕು ಕಡಿಮೆಯಾಗಿದ್ದು, ಶಾಲಾ-ಕಾಲೇಜುಗಳು ನಿಗದಿಯಂತೆ ನಡೆಯುತ್ತಿವೆ. ಅದರಲ್ಲೂ ಇಂದಿನಿಂದ ಶಾಲೆಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಇದಕ್ಕಾಗಿ ರೆಡಿಯಾಗುತ್ತಿದ್ದಾರೆ. ಇದರ ಜೊತೆಗೆ ಈಗ ನಡೆಯುತ್ತಿರುವ ದ್ವಿತೀಯ ಪಿಯು ಪರೀಕ್ಷೆ ಮೇ 18ರಂದು ಅಂತ್ಯವಾಗಲಿದೆ.
ಪರೀಕ್ಷೆಯ ಸಂದರ್ಭದಲ್ಲಿ ಮೌಲ್ಯಮಾಪನ ಬಹಿಷ್ಕಾರ ಎಂಬುದು ಕೇಳಿಬರುತ್ತಿದ್ದ ಸಾಮಾನ್ಯ ಮಾತಾಗಿದ್ದು, ಇದರಿಂದಾಗಿ ಫಲಿತಾಂಶ ವಿಳಂಬವಾಗುವುದು ಎಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿತ್ತು. ಆದರೆ ಈ ಬಾರಿ ಮೌಲ್ಯಮಾಪನ ಬಹಿಷ್ಕಾರ ಮಾಡದೆ ನಿಗದಿತ ದಿನಾಂಕದಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲು ಪಿಯು ಉಪನ್ಯಾಸಕರು ನಿರ್ಧರಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೌಲ್ಯಮಾಪನ ಕಾರ್ಯವನ್ನು ನಿಗದಿತ ದಿನಾಂಕದಿಂದ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ತಿಳಿಸಿದ್ದು, ಹೀಗಾಗಿ ಮೇ 23 ರಿಂದ 50ಕ್ಕೂ ಅಧಿಕ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ.