ವೈದಿಕ ಶಿಕ್ಷಣ ಮತ್ತು ಆಧುನಿಕ ಶಿಕ್ಷಣವನ್ನು ಸಮೀಕರಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಅಡಿಯಿಟ್ಟಿದ್ದು, ಇದಕ್ಕಾಗಿ ವೈದಿಕ ಶಿಕ್ಷಣ ಮಂಡಳಿ ರಚಿಸಲು ತೀರ್ಮಾನಿಸಲಾಗಿದೆ.
ಈ ಮೂಲಕ ವೇದ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ತೀರ್ಮಾನಿಸಲಾಗಿದ್ದು, ವೈದಿಕ ಶಿಕ್ಷಣ ಮಂಡಳಿ, ಇತರೆ ಶೈಕ್ಷಣಿಕ ಮಂಡಳಿಗಳ ರೀತಿಯಲ್ಲಿಯೇ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ.
ವೇದವನ್ನು ಆಧುನಿಕ ಸಮಾಜಕ್ಕೂ ಪ್ರಸ್ತುತವಾಗಿಸುವ ಉದ್ದೇಶವನ್ನು ಶಿಕ್ಷಣ ಸಚಿವಾಲಯ ಹೊಂದಿದ್ದು, ಹೀಗಾಗಿ ಪದವಿ ಹಂತದ ಕೋರ್ಸ್ ಗಳನ್ನು ಸಹ ಆರಂಭಿಸಲಾಗುತ್ತದೆ. ಅಲ್ಲದೆ ವೇದ ಕಲಿಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಹ ನೀಡುವ ಸಾಧ್ಯತೆ ಇದೆ.