ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ತುರವಿಹಾಳದಲ್ಲಿ ವೈದ್ಯರು ಮೃತಪಟ್ಟಿದೆ ಎಂದು ಹೇಳಿದ್ದ ನವಜಾತ ಶಿಶುವನ್ನು ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋದಾಗ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ.
ನವಜಾತ ಶಿಶು ಮೃತಪಟ್ಟಿರುವುದಾಗಿ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಶಿಶುವಿನ ಚಲನವಲನ ವಿಲ್ಲದ ಕಾರಣ ಮಗುವನ್ನು ಮಣ್ಣು ಮಾಡಲು ಪೋಷಕರು ತೆಗೆದುಕೊಂಡು ಹೋದ ಸಂದರ್ಭದಲ್ಲಿ ಮಗು ಉಸಿರಾಡುತ್ತಿರುವುದು ಕಂಡುಬಂದಿದೆ.
ಈರಪ್ಪ ಮತ್ತು ಅಮರಮ್ಮ ದಂಪತಿಗೆ ತುರವಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಆಸ್ಪತ್ರೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಪೋಷಕರು ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಿದ್ದು, ಮೂರು-ನಾಲ್ಕು ದಿನ ಚಿಕಿತ್ಸೆ ನೀಡಿದ ಆಸ್ಪತ್ರೆಯವರು 12,000 ರೂ.ಗೂ ಅಧಿಕ ಬಿಲ್ ಮಾಡಿ ಶನಿವಾರ ಶಿಶು ಮೃತಪಟ್ಟಿರುವುದಾಗಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ದುಃಖದ ಮಡುವಿನಲ್ಲಿದ್ದ ಪೋಷಕರು ಮಗುವಿನ ಅಂತ್ಯಸಂಸ್ಕಾರಕ್ಕೆ ಮುಂದಾಗುತ್ತಿದ್ದಂತೆ ಸಂಬಂಧಿಕರೊಬ್ಬರು ಮಗು ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಮಗು ಮೃತಪಟ್ಟಿದೆ ಎಂದು ಹೇಳಿದ್ದ ಖಾಸಗಿ ಆಸ್ಪತ್ರೆ ವೈದ್ಯನ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.