ಪಂಜಾಬ್ ನ ಜೈಲುಗಳಲ್ಲಿ ಇನ್ನು ಮುಂದೆ ವಿಐಪಿ ಸಂಸ್ಕೃತಿ ಇರುವುದಿಲ್ಲ. ವಿಐಪಿ ಸೆಲ್ ಗಳನ್ನು ಆಡಳಿತ ನಡೆಸುವ ಬ್ಲಾಕ್ ಗಳನ್ನಾಗಿ ಮಾಡಲಾಗುತ್ತಿದೆ.
ಈ ವಿಚಾರವನ್ನು ಅಲ್ಲಿನ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.
ಕಳೆದ 50 ದಿನಗಳಲ್ಲಿ ಜೈಲುಗಳಲ್ಲಿ ಶೋಧನೆ ನಡೆಸಿದ ಸಂದರ್ಭದಲ್ಲಿ ಬಂಧಿಗಳಾಗಿರುವ ಗ್ಯಾಂಗ್ ಸ್ಟರ್ ಗಳು ಮತ್ತು ಕ್ರಿಮಿನಲ್ ಗಳು 700 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಬಳಸುತ್ತಿದ್ದು, ಅಲ್ಲಿಂದಲೇ ತಮ್ಮ ಕುಕೃತ್ಯಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾಂಗ್ ಸ್ಟರ್ ಗಳು ಮತ್ತು ಕ್ರಿಮಿನಲ್ ಗಳು ಜೈಲಿನಲ್ಲಿದ್ದುಕೊಂಡೇ ಅಪರಾಧ ಕೃತ್ಯಗಳನ್ನು ನಡೆಸುವುದಕ್ಕೆ ಕಡಿವಾಣ ಹಾಕುವುದಾಗಿ ಚುನಾವಣೆಗೆ ಮುನ್ನ ಮಾಡಿದ ಘೋಷಣೆಯಂತೆ ಜೈಲು ಆಡಳಿತದಲ್ಲಿ ಸುಧಾರಣೆ ತರಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮಾನ್ ತಿಳಿಸಿದ್ದಾರೆ.
10, 15, 25 ಸಾವಿರ ರೂ. ಪಿಂಚಣಿ ಸೌಲಭ್ಯ: ಮೊದಲ ಬಾರಿಗೆ ವಿನೂತನ ನಿವೃತ್ತಿ ಪೆನ್ಷನ್ ಯೋಜನೆ ಜಾರಿ
ಜೈಲಿನಲ್ಲಿರುವ ಖೈದಿಗಳು ನಾನಾ ವಿಧದ ಅಪರಾಧಗಳನ್ನು ಎಸಗಿ ನ್ಯಾಯಾಲಯಗಳಿಂದ ಶಿಕ್ಷೆ ಅನುಭವಿಸುತ್ತಿದ್ದರೂ ಜೈಲಿನಲ್ಲಿದ್ದುಕೊಂಡು ಐಶಾರಾಮಿ ಸೌಲಭ್ಯಗಳನ್ನು ಪಡೆಯುವಂತಿಲ್ಲ. ಆದರೆ, ಪ್ರಸ್ತುತ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜೈಲಿಗೆ ಬಂದರೆ ಅಲ್ಲಿ ಅವರಿಗೆ ವಿಐಪಿ ಸೌಲಭ್ಯಗಳು ಹೇಗೆ ದೊರೆಯುತ್ತಿವೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ನಾವು ಜೈಲಿನಲ್ಲಿರುವ ಇಂತಹ ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡಬೇಕಿದೆ. ಶಿಕ್ಷೆಗೆ ಗುರಿಯಾಗಿರುವ ಖೈದಿಗಳು ಜೈಲಿನಲ್ಲಿ ಆರಾಮವಾಗಿದ್ದಾರೆ, ಬ್ಯಾಂಡ್ ಮಿಂಟನ್, ಟೆನ್ನಿಸ್ ಆಡುತ್ತಾರೆ, ತಮಗೆ ಬೇಕಾದಾಗ ಟಿವಿಗಳನ್ನು ನೋಡುತ್ತಾರೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾದವರು ಶಿಕ್ಷೆಯನ್ನು ಅನುಭವಿಸಬೇಕೇ ಹೊರತು ಐಶಾರಾಮಿ ಜೀವನ ಸಾಗಿಸುವಂತಾಗಬಾರದು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಇಂತಹ ವಿಐಪಿ ಸಂಸ್ಕೃತಿಯನ್ನು ನಿಲ್ಲಿಸಲಿದೆ ಎಂದು ಮಾನ್ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.