ಬೆಂಗಳೂರು: ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಾಗೇಶ್ ನನ್ನು ಬೆಂಗಳೂರು ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಮಿಷ್ನರ್ ಕಮಲ್ ಪಂತ್, ಪಶ್ಚಿಮ ವಿಭಾಗ ಪೊಲೀಸರು ಆರೋಪಿ ನಾಗೇಶ್ ನನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲಿಸರಿಗೆ ತಲಾ 2 ಲಕ್ಷ ರೂಪಾಯಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಆರೋಪಿ ಯಾವುದೇ ಸುಳಿವಿಲ್ಲದೇ ನಾಪತ್ತೆಯಾಗಿದ್ದ. ಡಿಸಿಪಿ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಯುವತಿಯನ್ನು ಆಕೆಗೆ ಗೊತ್ತಾಗದಂತೆ ಹಿಂಬಾಲಿಸುತ್ತಿದ್ದ. ಪ್ರತಿಬಾರಿ ಆಕೆಯನ್ನು ಮದುವೆಯಾಗುವಂತೆ ಕೇಳುತ್ತಿದ್ದ. ಆದರೆ ಯುವತಿ ನೀನು ನನ್ನ ಅಣ್ಣನಂತೆ ಇದ್ದೀಯಾ. ಮತ್ತೆ ಮತ್ತೆ ಈ ವಿಚಾರ ಕೇಳಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಳು. ಆದರೂ ಆರೋಪಿ ಯುವತಿಯ ಹಿಂದೆ ಬಿದ್ದಿದ್ದ. ಏ.20ರಂದು ಆರೋಪಿ ಖಾಸಗಿ ಕಂಪನಿ ಲೆಟರ್ ಹೆಡ್ ಬಳಸಿ ಸಲ್ಫ್ಯೂರಿಕ್ ಆಸಿಡ್ ಖರೀದಿ ಮಾಡಿದ್ದ ಎಂದು ತಿಳಿಸಿದ್ದಾರೆ.