ಇತ್ತೀಚೆಗಷ್ಟೆ ಬಾಲಿವುಡ್ ನಟ ಅಜಯ್ದೇವಗನ್ ಹಾಗೂ ಸ್ಯಾಂಡಲ್ವುಡ್ ನಟ ಸುದೀಪ್ ಭಾಷಾ ವಿಚಾರವಾಗಿ ವಾದ ವಿವಾದ ಮಾಡಿದ್ದು, ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ಮತ್ತೆ ತಮಿಳುನಾಡಿನ ಸಚಿವ ಕೆ. ಪೊನ್ಮುಡಿ ಹಿಂದಿ ಭಾಷೆ ಮಾತನಾಡುವವರ ಕುರಿತು ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಅದೇನೆಂದರೆ ಹಿಂದಿ ಭಾಷೆ ಮಾತನಾಡುವವರು ಕೊಯಮತ್ತೂರಿನಲ್ಲಿ ಪಾನಿಪುರಿ ಮಾರುತ್ತಿದ್ದಾರೆ ಅನ್ನೋ ಹೇಳಿಕೆ.
ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ತಮಿಳುನಾಡಿನ ಸಚಿವ ಕೆ. ಪೊನ್ಮುಡಿ ಮಾತನಾಡುವಾಗ ‘ತಮಿಳುನಾಡಿನಲ್ಲಿ ಇಂಗ್ಲೀಷ್ ಮತ್ತು ತಮಿಳು ಎರಡೇ ಭಾಷೆಗಳು ಚಾಲ್ತಿಯಲ್ಲಿ ಇರುವುದು. ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆಯಾದರೆ, ತಮಿಳು ಸ್ಥಳೀಯ ಭಾಷೆಯಾಗಿದೆ. ಹಿಂದಿ ಭಾಷೆ ಕಲಿಯುವುದರಿಂದ ಉದ್ಯೋಗ ಸಿಗುತ್ತೆ ಅಂತ ಹೇಳಲಾಗುತ್ತೆ. ಹಾಗಾದರೆ ಹಿಂದಿ ಕಲಿತ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ. ನಮ್ಮ ರಾಜ್ಯ ಹಾಗೂ ಕೊಯಮತ್ತೂರಿನಲ್ಲಿ ಹಿಂದಿ ಮಾತನಾಡುವವರು ಪಾನಿಪುರಿ ಮಾರುತ್ತಿದ್ದಾರೆ ಎಂದು ಅವರು ಹೇಳಿದರು.
ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಕೂಡಾ ತಮಿಳು ಹಾಗೂ ಇಂಗ್ಲಿಷ್ ಭಾಷೆ ಪರವಾಗಿ ಇದ್ದರು. ಅಂತ ಸಹ ಶಿಕ್ಷಣ ಸಚಿವ ಕೆ. ಪೊನ್ಮುಡಿ ವೇದಿಕೆ ಮೇಲೆ ಹೇಳಿದರು, ಅದೇ ವೇದಿಕೆ ಮೇಲೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಕೂಡಾ ಹಾಜರಿದ್ದರು.
ಹಿಂದಿ ಭಾಷೆ ಹೇರಿಕೆ ಬಗ್ಗೆ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ಆಗುತ್ತಿರಬೇಕಾದರೆ, ಕೆ. ಪೊನ್ಮುಡಿ ನೀಡಿರುವ ಹೇಳಿಕೆ ಇನ್ನಷ್ಟು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ