ಬೆಂಗಳೂರು: ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಶಾಲೆ ಆರಂಭದ ಮುನ್ನಾ ದಿನ ಶಾಲೆಯ ಆವರಣ, ತರಗತಿ ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯ ಸ್ವಚ್ಛಗೊಳಿಸಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ರಂಗೋಲಿ ಹಾಕಿ ಮಕ್ಕಳನ್ನು ಸ್ವಾಗತಿಸಬೇಕು. ಮಧ್ಯಾಹ್ನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಸಾರ್ವಜನಿಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಶಾಲೆಯಲ್ಲಿ ಹಬ್ಬದ ವಾತಾವರಣ ಮೂಡಿಸಿ ಶಾಲಾರಂಭ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಶಾಲೆಯ ಆರಂಭದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದು, ಮಕ್ಕಳಿಗೆ ಆರಂಭದ ದಿನ ಸಿಹಿಯೂಟ ವ್ಯವಸ್ಥೆ ಮಾಡಬೇಕು. ತರಗತಿ ವೇಳಾಪಟ್ಟಿ, ಶಿಕ್ಷಕರ ವೇಳಾಪಟ್ಟಿಯನ್ನು ತಯಾರಿಸಿಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.
ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಮೇ 30ರವರೆಗೆ ನಡೆಸಬೇಕು. ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನ, ಮಕ್ಕಳ ದಾಖಲಾತಿ, ಪ್ರೋತ್ಸಾಹದಾಯಕ ಯೋಜನೆಗಳ ಪೂರೈಕೆಯ ಬಗ್ಗೆ ಮೇಲ್ವಿಚಾರಣೆ ಅಧಿಕಾರಿಗಳು ಪರಿಶೀಲಿಸಬೇಕು. ಜೂನ್ 10 ರಂದು ಉಪನಿರ್ದೇಶಕರು ವರದಿ ಕಳುಹಿಸಬೇಕು ಎಂದು ಹೇಳಲಾಗಿದೆ.