ಭಾರತದಲ್ಲಿ ಇತ್ತೀಚೆಗೆ ಮದುವೆಯ ವಿಡಿಯೋ, ಫೋಟೋಗಳು ಭಾರಿ ಸದ್ದು ಮಾಡುತ್ತಿವೆ. ವಧು-ವರರು ತಮ್ಮ ಮದುವೆಯನ್ನು ಸ್ಮರಣೀಯವನ್ನಾಗಿರಿಸಲು ಬಯಸುತ್ತಾರೆ. ಕೆಲವರು ಸಿಂಪಲ್ ಆಗಿ ಮದುವೆಯಾಗಲು ಇಷ್ಟಪಟ್ಟರೆ, ಇನ್ನೂ ಕೆಲವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ಹಾಗೆಯೇ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಮದುವೆ ಸಂಭ್ರಮದ ವೇಳೆ ಗುಂಡು ಹಾರಿಸುವ ಪದ್ಧತಿ ಇನ್ನೂ ಕೂಡ ಚಾಲ್ತಿಯಲ್ಲಿದೆ. ಇದು ಕಾನೂನು ಬಾಹಿರವಾಗಿದ್ದರೂ ಸಹ ಹಲವಾರು ಮಂದಿ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿರುವುದು ನಿಜಕ್ಕೂ ವಿಪರ್ಯಾಸ
ಇದೀಗ ಬಿಹಾರದಲ್ಲಿ ನಡೆದ ಮದುವೆಯೊಂದರ ಆರತಕ್ಷತೆಯಲ್ಲಿ ವಧು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಖಗಾರಿಯಾ ಜಿಲ್ಲೆಯ ಭರತಖಂಡ ಗ್ರಾಮದಲ್ಲಿ ನಡೆದಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮೊಹಮ್ಮದ್ ಆಸಿಫ್ ಎಂಬಾತ ಮೇ 10 ರಂದು ಮದುವೆಯ ಆರತಕ್ಷತೆ ಏರ್ಪಡಿಸಿದ್ದರು. ವಧು ವೇದಿಕೆಯಿಂದ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ವಧುವಿಗೆ ಬಂದೂಕಿನಿಂದ ಗುಂಡು ಹಾರಿಸಲು ವ್ಯಕ್ತಿಯೊಬ್ಬರು ಸಹಾಯ ಮಾಡಲು ಬಂದಾಗ ವಧು-ವರರ ಸ್ನೇಹಿತರು ಮತ್ತು ಸಂಬಂಧಿಕರು ವೇದಿಕೆಯಲ್ಲಿದ್ದರು. ಸಂಭ್ರಮಾಚರಣೆಯ ಫೈರಿಂಗ್ ನಂತರ ವಧು ಮತ್ತು ವರರಿಬ್ಬರೂ ಸಂತಸದಿಂದ ಇದ್ದರು. ವಧು ಫೈರಿಂಗ್ ಮಾಡುವಾಗ ವರ ಖುಷಿಯಿಂದ ನಗುತ್ತಿದ್ದ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ.
ತಮ್ಮ ಸುತ್ತಲೂ ನಿಂತಿರುವ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ವಧು ಗುಂಡು ಹಾರಿಸಿದ್ದನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಳಕೆದಾರರು ಒತ್ತಾಯಿಸಿದ್ದಾರೆ.