ತಿರುಪ್ಪೂರ್: ಜಾತಿ ನಿಂದನೆ ಮತ್ತು ಒಪ್ಪಿಗೆಯಿಲ್ಲದೆ ಮಹಿಳೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಇಮಾನ್ ಹಮೀಬ್ ಎಂದು ಗುರುತಿಸಲಾಗಿದೆ. ತಿರುಪ್ಪೂರ್ ಜವಳಿ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ ಸ್ಟಾಗ್ರಾಮ್ ಮೂಲಕ ಇಮಾನ್ ನನ್ನು ಭೇಟಿಯಾಗಿದ್ದು, ಸ್ನೇಹಿತರಾದ ನಂತರ ಪರಸ್ಪರ ಸಂಬಂಧ ಬೆಳೆಸಿಕೊಂಡೆವು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ತನಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರಿಂದ ಆಕೆ ಆತನೊಂದಿಗೆ ತಿರುಪ್ಪೂರ್ ಗೆ ಬಂದಿದ್ದಳು. ಆದರೆ, ಕೆಲವು ದಿನಗಳ ನಂತರ ಇಮಾನ್ ತನ್ನ ಧರ್ಮವನ್ನು ಬದಲಿಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಬಲವಂತ ಮಾಡಿದ್ದಾನೆ ಎನ್ನಲಾಗಿದೆ.
ಅವಳು ವಿರೋಧಿಸಿದಾಗ ಅವನು ನಿಂದಿಸಿದ್ದಾನೆ. ಅವಳ ಬಗ್ಗೆ, ಆಕೆಯ ಕುಟುಂಬದ ಬಗ್ಗೆ ಜಾತಿ ನಿಂದನೆ ಮಾಡಿದ್ದಾನೆ. ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಇಮಾನ್ ತನ್ನ ಮೇಲೆ ಹಲ್ಲೆ ಮಾಡಿದ್ದ. ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದ. ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಮೇ 5 ರಂದು ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ಇಮಾನ್ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ(ದೌರ್ಜನ್ಯಗಳ ತಡೆ) ಕಾಯಿದೆ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿ ವಿವಿಧ ಐಪಿಸಿ ಸೆಕ್ಷನ್ ಗಳಡಿ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆರೋಪಿಯನ್ನು ತಿರುಪ್ಪೂರ್ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿದೆ.