ಕಲಬುರ್ಗಿ: ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮದ ಮಹಾನ್ ಕಿಂಗ್ ಪಿನ್ ಗಳು, ಸೂತ್ರಧಾರರು ಬೆಂಗಳೂರಿನಲ್ಲಿಯೇ ಇದ್ದಾರೆ. ಈಗ ಬಂಧನವಾಗಿರುವ ಕಿಂಗ್ ಪಿನ್ ಗಳು ಮಧ್ಯವರ್ತಿಗಳು ಅಷ್ಟೇ. ಮಹಾ ಕಿಂಗ್ ಪಿನ್ ಗಳ ಹೆಸರು ಬಹಿರಂಗಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಕರಣದ ಆರೋಪಿ ಆರ್.ಡಿ.ಪಾಟೀಲ್ ಅಕ್ರಮದಲ್ಲಿ ಭಾಗಿಯಾಗಿರುವವರ ಹೆಸರು ಹೇಳಲು ಸಿದ್ಧ. ಹೆಸರು ಹೇಳಿದರೆ ತನಿಖೆ ಮಾಡುವ ಧೈರ್ಯ ಸರ್ಕಾರಕ್ಕಿದೆಯೇ ಎಂದು ಸವಾಲು ಹಾಕಿದ್ದಾರೆ. ಆದರೂ ಸರ್ಕಾರ ಮಹಾನ್ ಕಿಂಗ್ ಪಿನ್ ಗಳ ಹೆಸರು ಬಹಿರಂಗ ಪಡಿಸಲು ಮುಂದಾಗುತ್ತಿಲ್ಲ ಯಾಕೆ? ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅಕ್ರಮದ ಹಿಂದೆ ಇರುವ ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಯಾವೆಲ್ಲ ಪ್ರಮುಖರು ಭಾಗಿಯಾಗಿದ್ದಾರೆ ಎಂಬುದು ಹೊರಬರಬೇಕಿದೆ. ಪಿ ಎಸ್ ಐ ಅಕ್ರಮದ ಬಗ್ಗೆ ನಾನು ಮಾಹಿತಿ ನೀಡಲು ಯತ್ನಿಸಿದರೆ ನನಗೆ ಮೂರು ಬಾರಿ ನೋಟೀಸ್ ನೀಡಿದರು. ಆದರೆ ಬಿಜೆಪಿ ಶಾಸಕರಿಗೆ ಎಷ್ಟು ಬಾರಿ ನೋಟೀಸ್ ನೀಡಿದರು? ಪ್ರಕರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಬಂಧಿಸಿದರು. ಆದರೂ ಆಕೆಯ ಹುದ್ದೆಯನ್ನು ಸರ್ಕಾರ ಹಿಂಪಡೆದಿಲ್ಲ. ದಿಶಾ ಸಮಿತಿ, ರಾಜ್ಯ ನರ್ಸಿಂಗ್ ಕೌನ್ಸಿಲ್ ಸದಸ್ಯತ್ವವನ್ನು ದಿವ್ಯಾಗೆ ನೀಡಲಾಗಿದೆ. ಈ ಹುದ್ದೆ ಹಿಂಪಡೆದಿಲ್ಲ ಯಾಕೆ? ಹಲವು ಅಧಿಕಾರಿಗಳನ್ನೇ ಅಮಾನತು ಮಾಡಿರುವ ಸರ್ಕಾರ ದಿವ್ಯಾ ಹುದ್ದೆಯನ್ನು ಯಾಕೆ ಹಿಂಪಡೆದಿಲ್ಲ. ಸರ್ಕಾರದ ನಡೆಯೇ ಅನುಮಾನಾಸ್ಪದವಾಗಿದೆ ಎಂದು ಹೇಳಿದರು.