ನಾಗೇಶ್ ಎಂಬ ಕಿರಾತಕನಿಂದ ಬೆಂಗಳೂರಿನ ಸುಂಕದಕಟ್ಟೆ ಬಳಿ ಆಸಿಡ್ ದಾಳಿಗೊಳಗಾದ ಸಂತ್ರಸ್ಥೆ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಈಗ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಮುಖದ ಕಸಿ ಚಿಕಿತ್ಸೆಯನ್ನು ಶೇ.90 ರಷ್ಟು ಪೂರ್ಣಗೊಳಿಸಲಾಗಿದ್ದು, ಇನ್ನು ಶೇ.10 ರಷ್ಟು ಬಾಕಿ ಇದೆ ಎನ್ನಲಾಗಿದೆ. ಶೇ.35 ರಷ್ಟು ಸುಟ್ಟ ಗಾಯಗಳಾಗಿದ್ದ ಯುವತಿಯನ್ನು ಈವರೆಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.
ಮುತ್ತೂಟ್ ಮಿನಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುವಂತೆ ಪದೇ ಪದೇ ಪೀಡಿಸುತ್ತಿದ್ದ ನಾಗೇಶ, ಕಛೇರಿಗೂ ಬಂದು ಬೆದರಿಕೆ ಹಾಕಿದ್ದ. ಬಳಿಕ ಕಛೇರಿಗೆ ತೆರಳುತ್ತಿದ್ದ ವೇಳೆ 16 ದಿನಗಳ ಹಿಂದೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ.
ಆರೋಪಿ ಪತ್ತೆಗಾಗಿ ಪೊಲೀಸರು ಹಲವು ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡರೂ ಪ್ರಯೋಜನವಾಗಿಲ್ಲ. ನಾಗೇಶ ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿರಬಹುದೆನ್ನಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.