ತನ್ನ ಸಮಸ್ಯೆಗೆ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿದ ಮಹಿಳೆಯೊಬ್ಬರು ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದ ಕಾರಣ ಕಚೇರಿ ಆವರಣದಲ್ಲಿಯೇ ಮಗುವಿನೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಸಂಗ ತಮಿಳುನಾಡಿನಲ್ಲಿ ನಡೆದಿದೆ.
ರಾಮನಾಥಪುರಂ ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಕುಂದುಕೊರತೆ ಪರಿಹಾರ ಶಿಬಿರ ಆಯೋಜಿಸಿದ್ದ ದಿನವೇ ಈ ಘಟನೆ ನಡೆದಿದೆ. ಮಹಿಳೆ ತನ್ನ ಮತ್ತು ಮಗುವಿನ ಮೇಲೆ ಸೀಮೆಎಣ್ಣೆ ಸುರಿದುಕೊಳ್ಳುತ್ತಿರುವುದನ್ನು ಸ್ಥಳದಲ್ಲಿದ್ದ ಕೆಲವು ಪತ್ರಕರ್ತರು ಗಮನಿಸಿ ತಡೆದರು.
ಆಕೆ ತನ್ನ ಮೇಲೆ, ಮಗುವಿನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಪೆಟ್ಟಿಗೆಯನ್ನು ತೆಗೆದು ಗೀರಲು ಮುಂದಾಗಿದ್ದಾಳೆ. ನಾವು ಮಧ್ಯಪ್ರವೇಶಿಸಿ ಅವಳೊಂದಿಗೆ ಮಾತನಾಡಲು ಪ್ರಯತ್ನಿಸಿ ಅವಳ ಕೈಯಿಂದ ಬೆಂಕಿಪೊಟ್ಟಣ ಕಿತ್ತುಕೊಂಡೆವು ಎಂದು ಫೋಟೋ ಜರ್ನಲಿಸ್ಟ್ ಸೇತು ತಿಳಿಸಿದ್ದಾರೆ.
ಆಕೆ ವರದಕ್ಷಿಣೆ ಕಿರುಕುಳದ ವಿರುದ್ಧ ಸಹಾಯ ಕೋರಿ ಸರ್ಕಾರಿ ಕಚೇರಿಯನ್ನು ಸಂಪರ್ಕಿಸಿದ್ದರು. ವರದಕ್ಷಿಣೆಯಾಗಿ ಐದು ಲಕ್ಷ ರೂ.ನಗದು ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಗುವನ್ನು ಆಕೆಯ ಪತಿ ತ್ಯಜಿಸಿದ್ದಾನೆ.
ನನ್ನ ಪತಿ ಇಂಡಿಯನ್ ಬ್ಯಾಂಕ್ನ ಕೀಲಕರೈ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಐದು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಈಗಾಗಲೇ 15 ಪವನ್ ಚಿನ್ನಾಭರಣ ತೆಗೆದುಕೊಂಡಿದ್ದಾನೆ. ಹೆಣ್ಣು ಮಗುವಾಯಿತೆಂದು ನೋಡಲೂ ಸಹ ಬರಲಿಲ್ಲ ಎಂದು ಆಕೆ ದೂರಿದ್ದಾಳೆ.
ಆತ್ಮಹತ್ಯೆ ಪ್ರಯತ್ನದ ತಪ್ಪಿಸಿದ ಬಳಿಕ ಪತ್ರಕರ್ತರಾದ ಸೇತು, ಕುಮಾರ್ ಮತ್ತು ವೀರಾ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ನೊಂದ ಮಹಿಳೆಯನ್ನು ಪೊಲೀಸರು ಸುರಕ್ಷಿತವಾಗಿ ಕರೆದೊಯ್ದರು.