ಪದೇಪದೆ ಅಗ್ನಿ ಅನಾಹುತಕ್ಕೆ ಕಾರಣವಾಗಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಈಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ. ಓಲಾ ಎಸ್1 ಪ್ರೊ ಸ್ಕೂಟರ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ತನ್ನಷ್ಟಕ್ಕೆ ತಾನೇ ರಿವರ್ಸ್ ಗೇರ್ ಗೆ ಶಿಫ್ಟ್ ಆಗಿ ಹಿಂದಕ್ಕೆ ಬಂದು ಅದರ ಸವಾರ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ವಿಚಾರವನ್ನು ಪಲ್ಲವ್ ಮಹೇಶ್ವರಿ ಎಂಬುವರು ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡಿದ್ದು, ನನ್ನ ತಂದೆ ಸ್ಕೂಟರ್ ಅನ್ನು ಪಾರ್ಕ್ ಮಾಡುವ ಸಂದರ್ಭದಲ್ಲಿ ತನ್ನಷ್ಟಕ್ಕೆ ತಾನೇ ರಿವರ್ಸ್ ಗೇರ್ ಗೆ ಶಿಫ್ಟ್ ಆಗಿ ಸ್ಕೂಟರ್ ಹಿಂದಕ್ಕೆ ರಭಸವಾಗಿ ಚಲಿಸಿದೆ. ಇದರ ಪರಿಣಾಮ ಸ್ಕೂಟರ್ ಹ್ಯಾಂಡಲ್ ಹಿಡಿದುಕೊಂಡಿದ್ದ ತಂದೆ ಗೋಡೆಗೆ ತಾಗುವಂತೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿದ್ದರೆ, ಕೈ ಮುರಿದಿದೆ ಎಂದು ಹೇಳಿಕೊಂಡಿದ್ದಾರೆ.
ಕಳೆದ ಜನವರಿಯಲ್ಲಿ ಖರೀದಿಸಿದ್ದ ಈ ಸ್ಕೂಟರ್ ನಿಂದ ಅನಾಹುತವಾಗಿರುವುದು ಇದೇನು ಮೊದಲಲ್ಲ. ಸ್ಕೂಟರ್ ಖರೀದಿಸಿದ ಎರಡನೇ ದಿನವೇ ಹಿಮ್ಮುಖವಾಗಿ ಚಲಿಸಿತ್ತಂತೆ. ಬ್ಯಾಟರಿ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಕಂಪನಿ ಸರಿ ಮಾಡಿಕೊಟ್ಟಿದೆ. ಇದಕ್ಕೆ ವೆಹಿಕಲ್ ಕಂಟ್ರೋಲ್ ಯೂನಿಟ್ ಸಹ ಅಳವಡಿಸಿದೆ ಎಂದು ಹೇಳಿದ್ದಾರೆ.
ಆದರೆ, ಇಂತಹ ಅನಾಹುತಗಳು ಸಂಭವಿಸಿದ ನಂತರ ಹಲವಾರು ಬಾರಿ ದೂರುಗಳನ್ನು ನೀಡಿದರೂ ಕಂಪನಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.