10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಮೌಲ್ಯಮಾಪನ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಇನ್ನು ಮೂರ್ನಾಲ್ಕು ದಿನಗಳೊಳಗಾಗಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಇದರ ಮಧ್ಯೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಫಲಿತಾಂಶದ ಬಳಿಕ ಮರುಮೌಲ್ಯಮಾಪನ ಅಥವಾ ಅಂಕಗಳ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಇನ್ನು ಮುಂದೆ ಮೂರು ದಿನಗಳಲ್ಲೇ ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೆಬ್ ಸೈಟ್ ನಲ್ಲಿ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಉತ್ತರ ಪತ್ರಿಕೆ ಲಭ್ಯವಾಗುವಂತೆ ಅನುಕೂಲ ಕಲ್ಪಿಸಲಾಗಿದೆ.
ಈ ಮೊದಲು ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮೌಲ್ಯಮಾಪನ ಅಥವಾ ಅಂಕಗಳ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಇಮೇಲ್ ವಿಳಾಸ ನೀಡುವ ಸಂದರ್ಭದಲ್ಲಿ ಒಂದು ಅಕ್ಷರ ವ್ಯತ್ಯಾಸವಾದರೂ ಸಹ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ತಲುಪುತ್ತಿರಲಿಲ್ಲ. ಇದರಿಂದ ವಿಳಂಬವಾಗುತ್ತಿತ್ತು.
ಆದರೆ ಇದೀಗ ಮಂಡಳಿಯ ವೆಬ್ಸೈಟ್ನಲ್ಲಿ ಉತ್ತರ ಪತ್ರಿಕೆಯ ಪ್ರತಿಯನ್ನು ಅಪ್ಲೋಡ್ ಮಾಡಲಿದ್ದು, ವಿದ್ಯಾರ್ಥಿಗಳು ನೀಡುವ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ವೇಳೆ ಲಾಗಿನ್ ಕ್ರಿಯೇಟ್ ಮಾಡಬೇಕಾಗುತ್ತದೆ. ಆ ಬಳಿಕ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಒಟಿಪಿಯನ್ನು ನಮೂದಿಸಿದರೆ ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ವಿದ್ಯಾರ್ಥಿಗಳು ನೋಡಬಹುದಾಗಿದೆ.